ಬಂಟ್ವಾಳ, ಮೇ 30, 2024 (ಕರಾವಳಿ ಟೈಮ್ಸ್) : ಈಚರ್ ಲಾರಿಯೊಂದು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿಯಲ್ಲೇ ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಡಿಕ್ಕಿಯಾಗಿ ಚಾಲಕರ ಸಹಿತ ಕೆಲವು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ಬುಧವಾರ ಸಂಭವಿಸಿದೆ.
ಬಿ ಸಿ ರೋಡು-ಕಡೂರು ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಎ-16-ಎಎ-6333 ನೋಂದಣಿ ಸಂಖ್ಯೆಯ ಈಚರ್ ಲಾರಿ ವಗ್ಗ ಎಂಬಲ್ಲಿ ಚಾಲಕನ ನಿಯಂತ್ರಣ ಮೀರಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗುವ ರಭಸಕ್ಕೆ ಜಾರಿಕೊಂಡು ಬಂದು ಇದೇ ವೇಳೆ ಮಂಗಳೂರು-ಸ್ಟೇಟ್ ಬ್ಯಾಂಕ್ ಕಡೆಯಿಂದ ಧರ್ಮಸ್ಥಳ ಕಡೆಗೆ ಸಂಚರಿಸುತ್ತಿದ್ದ ಕೆಎ57 ಎಫ್4437 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ ಸಿ ಬಸ್ಸಿನ ಮುಂಭಾಗಕ್ಕೆ ಡಿಕ್ಕಿಯಾಗಿದೆ.
ಅಪಘಾತದಿಂದ ಲಾರಿ ಚಾಲಕ ಚಿತ್ರದುರ್ಗ ಸಮೀಪದ ಹಿರಿಯೂರಿನ ಮಹೇಶ್ ಕುಮಾರ್, ಬಸ್ ಚಾಲಕ ಉಮೇಶ್, ಬಸ್ ಪ್ರಯಾಣಿಕರಾದ ನಳಿನಿ, ಮಧುರಾ, ಅಶ್ವಿನಿ, ಮುಹಮ್ಮದ್ ಇರ್ಶಾದ್, ಜಯಲಕ್ಷ್ಮಿ, ತಾರನಾಥ, ರಕ್ಷ, ರೋಹಿಣಿ ಎಂಬವರು ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಲಾರಿ ಪೂರ್ಣ ಪ್ರಮಾಣದಲ್ಲಿ ಜಖಂಗೊಂಡಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ. ಈ ಬಗ್ಗೆ ಬಸ್ ನಿರ್ವಾಹಕ ಮೈಲಾರಪ್ಪ ಎಸ್ ನಾಯ್ಕರ್ (37) ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment