ಬಂಟ್ವಾಳ, ಮೇ 23, 2024 (ಕರಾವಳಿ ಟೈಮ್ಸ್) : ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬಿ ಸಿ ರೋಡು ಖಾಸಗಿ ಬಸ್ಸು ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ನಡಿಗಲ್-ಆದರ್ಶನಗರ ನಿವಾಸಿ ಶಶಿಕಲ (38) ಎಂಬವರೇ ಪಿಕ್ ಪಾಕೆಟ್ ಗೊಳಗಾಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಇವರು ಗುರುವಾರ ಬೆಳಗ್ಗೆ ತನ್ನ ವ್ಯಾನಿಟಿ ಬ್ಯಾಗಿನಲ್ಲಿ ತವರು ಮನೆಯವರು ಹಾಗೂ ಗಂಡನ ಮನೆಯವರು ಉಡುಗೊರೆಯಾಗಿ ನೀಡಿದ ವಿವಿದ ಶೈಲಿಯ ವಿವಿಧ ಮಾದರಿಯ ಒಟ್ಟು 45 ಗ್ರಾಂ ಚಿನ್ನಾಭರಣಗಳನ್ನು ಇರಿಸಿಕೊಂಡು, ಗಂಡ ಮತ್ತು ಚಿಕ್ಕ ಮಗುವಿನ ಜೊತೆಯಲ್ಲಿ ಕಲ್ಲಡ್ಕದಿಂದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಬಂದು ಬಿ ಸಿ ರೋಡಿನಲ್ಲಿ ಬಸ್ಸಿನಿಂದ ಇಳಿದಿರುತ್ತಾರೆ. ಬಳಿಕ ರಸ್ತೆದಾಟಿ ಬಿ ಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಸ್ವೀಟ್ಸ್ ಅಂಗಡಿಗೆ ತೆರಳಿದ್ದು, ಈ ವೇಳೆಯೂ ಅವರ ಬ್ಯಾಗಲ್ಲಿ ಚಿನ್ನಾಭರಣಗಳಿತ್ತು. ಸ್ವಲ್ಪ ಸಮಯದ ಬಳಿಕ, ಬಿ ಸಿ ರೋಡು ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ, ಬ್ಯಾಗಲ್ಲಿದ್ದ 45 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುತ್ತದೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ಮೌಲ್ಯ 2 ಲಕ್ಷ ರೂಪಾಯಿ ಆಗಬಹುದು ಎಂಬುದಾಗಿ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment