ಪುತ್ತೂರು, ಮೇ 11, 2024 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಸ್ವಯಂಪ್ರೇರಿತ ತನಿಖೆಯಿಂದ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣದ ನೈಜ ಘಟನೆ ಬೆಳಕಿಗೆ ಬಂದಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ನಿವಾಸಿ ಚೇತನ್ ಕುಮಾರ್ (33) ಎಂಬಾತ ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದು, ಮೇ 9 ರ ರಾತ್ರಿಯಿಂದ 10 ರ ಬೆಳಗ್ಗಿನ ಜಾವದ ಮಧ್ಯೆಯ ಅವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಉಮಾವತಿ ಕೆ ಶೆಟ್ಟಿ (56) ಎಂಬವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಪ್ರಕಾರ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 18/2024 ಕಲಂ 174 ಐಪಿಸಿಯಂತೆ ಪ್ರಕರಣವೂ ದಾಖಲಾಗಿತ್ತು.
ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಠಾಣಾ ಪಿಎಸ್ಸೈ ಅವರು ಮೃತ ವ್ಯಕ್ತಿಯ ಶವ ಪಂಚನಾಮೆ ನಡೆಸುತ್ತಿದ್ದಾಗ ಮೃತ ವ್ಯಕ್ತಿಯ ದೇಹದಲ್ಲಿರುವ ಗಾಯಗಳಿಂದ ಸದ್ರಿ ಪ್ರಕರಣದ ನೈಜತೆಯ ಬಗ್ಗೆ ಅನುಮಾನಗೊಂಡು, ಘಟಣೆಯ ಬಗ್ಗೆ ಮೃತರ ತಾಯಿ ಹಾಗೂ ಇತರರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಇದು ಆತ್ಮಹತ್ಯೆ ಅಲ್ಲದೆ ಬೇರೆ ಕಾರಣಕ್ಕೆ ನಡೆದ ಸಾವು ಎಂಬುದು ಬಯಲಾಗಿದೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಂತೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವಂತೆ ಮೇ 10 ರಂದು ಬೆಳಿಗ್ಗಿನ ಜಾವ ಚೇತನ್ ಕುಮಾರ್ ಅಮಲು ಪದಾರ್ಥ ಸೇವಿಸಿ, ಮನೆಯ ಬಳಿ ಗಲಾಟೆ ನಡೆಸಿದ್ದು, ಆತನನ್ನು ತಡೆಯುವ ಸಲುವಾಗಿ ಮೃತರ ತಾಯಿ ಉಮಾವತಿ ಅವರು ನೆರೆಮನೆಯವರ ಸಹಾಯದಿಂದ ಬಲವಂತವಾಗಿ ಕಟ್ಟಿಹಾಕಲು ಯತ್ನಿಸಿರುತ್ತಾರೆ. ಈ ವೇಳೆ ಚೇತನ್ ಕುಮಾರ್ ಅವರಿಗೆ ಉಸಿರಾಟಕ್ಕೆ ಅಡಚಣೆಯಾಗಿ ಅಸ್ವಸ್ಥರಾಗಿ ಬಿದ್ದಿದ್ದು, ಆವರನ್ನು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವುದು ತಿಳಿದುಬಂದಿರುತ್ತದೆ ಎಂಬುದು ಬಯಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2024 ಕಲಂ 302, 201 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ತಾಯಿ ಹಾಗೂ ನೆರೆಮನೆ ನಿವಾಸಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
0 comments:
Post a Comment