ಕಡಬ, ಮೇ 04, 2024 (ಕರಾವಳಿ ಟೈಮ್ಸ್) : ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ರಾಶಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಸೋಮಸುಂದರ ಅಲಿಯಾಸ್ ಸುಬ್ರಹ್ಮಣ್ಯ (35) ಎಂಬವರೇ ಸಿಡಿಲಾಘಾತಕ್ಕೆ ಬಲಿಯಾದ ವ್ಯಕ್ತಿ. ಈ ಬಗ್ಗೆ ಅವರ ಪತ್ನಿ ಮೋಹಿನಿ ಅವರು ದೂರು ನೀಡಿದ್ದು, ಶುಕ್ರವಾರ (ಮೇ 3) ರಾತ್ರಿ ವಿಪರೀತ ಸಿಡಿಲು ಗಾಳಿ ಮಳೆ ಪ್ರಾರಂಭವಾಗಿದ್ದು, ಈ ಸಂದರ್ಭ ತನ್ನ ಗಂಡ ಸೋಮಸುಂದರ ಅಲಿಯಾಸ್ ಸುಬ್ರಹ್ಮಣ್ಯ (35) ಅವರು ಮನೆಯ ಅಂಗಳದಲ್ಲಿ ಒಣಗಲು ಹಾಕಿರುವ ಅಡಿಕೆಯನ್ನು ರಾಶಿ ಮಾಡುತ್ತಿದ್ದಾಗ, ಸಿಡಿಲು ಬಡಿದು ಕುಸಿದು ಬಿದ್ದಿರುತ್ತಾರೆ. ಕೂಡಲೇ ಅವರನ್ನು ಆರೈಕೆ ಮಾಡಿ, ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಸೋಮಸುಂದರ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ನಂಬ್ರ 05/2024 ಕಲಂ 174 CRPC ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment