ಬಂಟ್ವಾಳ, ಮೇ 10, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ್ ಅವರು ಅಪಘಾತದಲ್ಲಿ ಮೃತಪಟ್ಟಿರುವುದು ನನಗೆ ತೀವ್ರ ಆಘಾತ ತಂದಿದೆ. ಅವರ ಅಕಾಲಿಕ ಮರಣ ತುಂಬಾ ನೋವು ತಂದಿದೆ. ಒಬ್ಬ ಆತ್ಮೀಯನನ್ನು ಕಳೆದುಕೊಂಡು ನಾನು ದುಃಖಿತನಾಗಿದ್ದೇನೆ. ಅವರು ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡುಪಾಗಿಟ್ಟಿದ್ದರು. ಕಾರ್ಮಿಕ ಪರ ಹೋರಾಟ ಸಂಘಟಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಿದ್ದರು. ಸುಳ್ಯ, ಪುತ್ತೂರು ಭಾಗದಲ್ಲಿ ತಮಿಳು ನಿರಾಶ್ರಿತರ ಸೇವೆ ಮಾಡುತ್ತಿದ್ದರು. ತಮಿಳು ನಿರಾಶ್ರಿತರ ಉತ್ತಮ ಜೀವನಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದರು.
ಅತ್ಯುತ್ತಮ ಸಂಘಟಕರಾಗಿದ್ದ ಅವರು ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಹಗಲಿರುಳು ಶ್ರಮಿಸಿದ್ದರು. ಅವರ ಅಕಾಲಿಕ ಮರಣ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬ, ಬಂಧು-ಮಿತ್ರರು, ಹಿತೈಷಿಗಳಿಗೆ ನೋವು ಸಹಿಸುವ ಶಕ್ತಿ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಮಾನಾಥ ರೈ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment