ಬೆಂಗಳೂರು, ಮೇ 10, 2024 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‍ಇಎಬಿ) ಎಸ್ಸೆಸ್ಸೆಲ್ಸಿ ಪರೀಕ್ಷೆ-2 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಂದಿನ ಜೂನ್ ತಿಂಗಳ 7 ರಿಂದ 14ರವರೆಗೆ ಪರೀಕ್ಷೆಗಳು ನಡೆಯಲಿದೆ.
ಜೂನ್ 7 ರಂದು ಕನ್ನಡ, 8 ರಂದು ಹಿಂದಿ, ಜೂನ್ 10 ರಂದು ಗಣಿತ, 12 ರಂದು ವಿಜ್ಞಾನ, 13 ರಂದು ಇಂಗ್ಲೀಷ್, 14 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಸದರಿ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಉಪನಿರ್ದೇಶಕರು (ಆಡಳಿತ) ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಿಂದ ಪಡೆದುಕೊಂಡು ತಮ್ಮ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಕ್ರಮವಹಿಸಲು ತಿಳಿಸಿದೆ.
ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.15ರವರೆಗೆ ಅವಧಿ ನಿಗದಿಪಡಿಸಲಾಗಿದೆ.
ಪ್ರಥಮ ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3ಗಂಟೆ ಮತ್ತು ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
ಎನ್.ಎಸ್.ಕ್ಯೂ.ಎಫ್. ವಿಷಯಗಳ ಪರೀಕ್ಷೆ ಬೆಳಗ್ಗೆ 10.15 ರಿಂದ 12.30ರವರೆಗೆ ನಡೆಯಲಿದೆ. ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2 ಗಂಟೆ ಹಾಗೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.
0 comments:
Post a Comment