ಬಂಟ್ವಾಳ, ಮೇ 21, 2024 (ಕರಾವಳಿ ಟೈಮ್ಸ್) : ಇನ್ನೇನು ಮುಂಗಾರು ಆರಂಭಗೊಂಡರೆ ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸುತ್ತಲೇ ಇದ್ದರೂ ಇತ್ತ ಮಳೆ ಆರಂಭವಾಗಿ ಮೂರ್ನಾಲ್ಕು ದಿನಗಳು ಕಳೆದರೂ ಬಂಟ್ವಾಳ ಪುರಸಭೆ ಮಾತ್ರ ಇನ್ನೂ ಕೂಡಾ ಯಾವುದಕ್ಕೂ ಸಿದ್ದತೆಯನ್ನೇ ನಡೆಸಿಲ್ಲ ಎಂದು ಪುರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಮೂಡ, ಬಿ ಕಸ್ಬಾ ಹಾಗೂ ಪಾಣೆಮಂಗಳೂರು ಈ ಮೂರೂ ಗ್ರಾಮಗಳಲ್ಲೂ ಚರಂಡಿ ಹೂಳೆತ್ತುವುದಾಗಲೀ, ಕಳೆಗಿಡಗಳನ್ನು ಕಡಿಸುವುದಾಗಿಲೀ, ವಿದ್ಯುತ್ ದೀಪಗಳನ್ನು ಸರಿಪಡಿಸುವುದಾಗಲೀ ಯಾವುದನ್ನೂ ಮಾಡಿಲ್ಲ. ಪುರಸಭಾ ವ್ಯಾಪ್ತಿಯ ಎಲ್ಲಾ ಚರಂಡಿಗಳು ಮರಗಿಡಗಳು, ಕಳೆಗಿಡಗಳು ಹಾಗೂ ಹೂಳಿನಿಂದ ತುಂಬಿ ಹೋಗಿದ್ದು, ಮುಂಗಾರು ಪೂರ್ವದ ಆರಂಭಿಕ ಮಳೆಗೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆಯಲ್ಲದೆ ಸಮೀಪದ ಮನೆ-ಅಂಗಡಿಗಳಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಪೂರ್ಣ ಪ್ರಮಾಣದಲ್ಲಿ ಮುಂಗಾರು ಆರಂಭಗೊಂಡರೆ ಸಮಸ್ಯೆ ಬಿಗಡಾಯಿಸಿ ಅಪಾಯಗಳು ಎದುರಾಗುವ ಸಾದ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪುರಸಭಾ ಆರೋಗ್ಯಾಧಿಕಾರಿಗಳಿಗೆ ಸಾಕಷ್ಟು ಬಾರಿ ದೂರಿಕೊಂಡರೂ ಸ್ಪಂದನೆ ಮಾತ್ರ ಶೂನ್ಯ ಎನ್ನುತ್ತಾರೆ ಪುರವಾಸಿಗಳು.
ಇನ್ನು ಪುರಸಭಾ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕಂಬಗಳಲ್ಲಿರುವ ದಾರಿ ದೀಪಗಳು ಕೆಟ್ಟು ಹೋಗಿ ಹಲವು ದಿನಗಳು ಕಳೆದರೂ ಕೇಳುವ ಗತಿಯಿಲ್ಲದಂತಾಗಿದೆ. ಈ ಬಗ್ಗೆ ಪುರಸಭಾ ಸಹಾಯವಾಣಿ ಕೌಂಟರಿನಲ್ಲಿ ಸಾರ್ವಜನಿಕರು ಲಿಖಿತವಾಗಿ ಬರೆಸಿಕೊಂಡು ದೂರು ದಾಖಲಿಸಿದರೂ ಅದಕ್ಕೂ ಸ್ಪಂದನೆ ಇಲ್ಲದೆ ವಿದ್ಯುತ್ ದೀಪ ಇಲ್ಲದೆ ಪರಿಸರ ಕಗ್ಗತ್ತಲಲ್ಲೇ ಕಳೆಯುತ್ತಿದೆ. ಮಳೆಗಾಲದಲ್ಲಿ ವಿದ್ಯುತ್ ದೀಪ ಇಲ್ಲದೆ ಇದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಬಗ್ಗೆಯೂ ಪುರವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಪ್ರಕಟವಾಗದೆ ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೆ ಚುನಾಯಿತ ಪ್ರತಿನಿಧಿಗಳು ಇದ್ಯಾವುದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದರೆ, ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸದೆ ಇರುವುದರಿಂದ ಜನ ಮಾತ್ರ ಅತಂತ್ರರಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಗಮನ ಹರಿಸಿ ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವಂತೆ ಪುರವಾಸಿಗಳು ಆಗ್ರಹಿಸಿದ್ದಾರೆ.
0 comments:
Post a Comment