ಬೆಳ್ತಂಗಡಿ, ಮೇ 14, 2024 (ಕರಾವಳಿ ಟೈಮ್ಸ್) : ಕೊಕ್ಕಡ ಜಂಕ್ಷನಿನಲ್ಲಿ ನಿಂತಿದ್ದ ವ್ಯಕ್ತಿಗೆ ಕ್ಷುಲ್ಲಕ ಕಾರಣಕ್ಕೆ ಪಶು ವೈದ್ಯರೋರ್ವರು ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೃಷ್ಣಪ್ಪ ಎಂದು ಹೆಸರಿಸಲಾಗಿದೆ. ಆರೋಪಿ ಪಶು ವೈದ್ಯನನ್ನು ಕುಮಾರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮೃತರ ಪತ್ನಿ ಭಾರತಿ ಅವರು ಪೊಲೀಸರಿಗೆ ದೂರು ನೀಡಿದ್ದು, ಕೃಷ್ಣಪ್ಪ ಅವರು ಅನಾರೋಗ್ಯದ ಕಾರಣ ಮೇ 12 ರಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮೇ 13 ರಂದು ವಾಪಾಸ್ಸು ಕೊಕ್ಕಡಕ್ಕೆ ಬಂದಿರುತ್ತಾರೆ. ಅದೇ ದಿನ ರಾತ್ರಿ ಕೃಷ್ಣಪ್ಪ ಅವರು ಕೊಕ್ಕಡ ಜಂಕ್ಷನ್ ಬಳಿ ನಿಂತಿದ್ದಾಗ, ಕೊಕ್ಕಡದ ಪಶು ವೈದ್ಯ ಕುಮಾರ್ ಎಂಬವರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಕೃಷ್ಣಪ್ಪರವರಿಗೆ ಕೈಯಿಂದ ಹಲ್ಲೆ ಮಾಡಿರುತ್ತಾರೆ. ಹಲ್ಲೆಯ ಪರಿಣಾಮ ಕೃಷ್ಣಪ್ಪರವರು ಬಿದ್ದು ಮೃತಪಟ್ಟಿದ್ದಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2024 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment