ಬಂಟ್ವಾಳ, ಮೇ 15, 2024 (ಕರಾವಳಿ ಟೈಮ್ಸ್) : ಬೈಕಿಗೆ ಲಾರಿ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಸವಾರರ ಮೇಲೆ ಅದೇ ಲಾರಿ ಹರಿದ ಪರಿಣಾಮ ಸವಾರ ದಾರುಣವಾಗಿ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ನಿನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತ ಬೈಕ್ ಸವಾರನನ್ನು ಮೂಲತಃ ಉತ್ತರ ಪ್ರದೇಶ ರಾಜ್ಯದ ನಿವಾಸಿ, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಸೋನು (19) ಹಾಗೂ ಗಾಯಾಳು ಸಹಸವಾರನನ್ನು ಕಾರ್ಕಳ ನಿವಾಸಿ ಪ್ರಸಾದ್ (22) ಎಂದು ಹೆಸರಿಸಲಾಗಿದೆ.
ಉಪ್ಪಿನಂಗಡಿ ಸಮೀಪದ ನೆಲ್ಯಾಡಿ ಎಂಬಲ್ಲಿ ಹೋಟೆಲ್ ಕೆಲಸ ಮಾಡುವ ಇಬ್ಬರು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮಾರಿಪಳ್ಳ ಜಂಕ್ಷನ್ನಿನಲ್ಲಿ ಕಂಟೈನರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಇಬ್ಬರು ಬೈಕ್ ಸವಾರರ ಮೇಲೆ ಅದೇ ಕಂಟೈನರ್ ಲಾರಿ ಹರಿದ ಪರಿಣಾಮ ಇಬ್ಬರೂ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಸವಾರ ಸೋನು ಅವರನ್ನು ತಕ್ಷಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಪ್ರಸಾದ್ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ಮಾರಿಪಳ್ಳ ನಿವಾಸಿ ಇಮ್ರಾನ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment