ಪುತ್ತೂರು, ಮೇ 23, 2024 (ಕರಾವಳಿ ಟೈಮ್ಸ್) : ಮನೆ ಮಂದಿ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಮತ್ತು ನಗದು ಹಣ ದೋಚಿದ ಘಟನೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಪಡೀಲ್-ವಿಜಯನಗರ ಬಡಾವನೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಶ್ರಿಮತಿ ವಿಜಯಶ್ರೀ ಐ ಭಟ್ (53) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ವಿಜಯಶ್ರೀ ಭಟ್ (53) ಅವರು ಮೇ 10 ರಂದು ತನ್ನ ಮಗಳು ಹಾಗೂ ಗಂಡನೊಂದಿಗೆ, ಮಗನ ಮನೆಗೆ ಹೋಗಿ, ಅಲ್ಲಿಂದ ಮರುದಿನ ಮೈಸೂರಿಗೆ ತೆರಳಿರುತ್ತಾರೆ. ಇವರ ಮಗನ ಬಳಿ ಮನೆಯ ಇನ್ನೊಂದು ಕೀ ಇದ್ದು, ಆತ ಮೇ 17 ರಂದು ಮನೆಗೆ ಬಂದು ವಾಸವಿದ್ದು, ಮರುದಿನ ಅಂದರೆ ಮೇ 18 ರಂದು ಬೆಳಿಗ್ಗೆ ಮನೆಗೆ ಮತ್ತು ಗೇಟಿಗೆ ಬೀಗ ಹಾಕಿ ತೆರಳಿದ್ದಾನೆ. ಮೇ 23 ರಂದು ಬೆಳಿಗ್ಗೆ ನೆರೆಮನೆ ಮಹಿಳೆ ಕರೆಮಾಡಿ ಮನೆಯ ಬಾಗಿಲು ತೆರೆದುಕೊಂಡಿರುದಾಗಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ಮುಖ್ಯದ್ವಾರದ ಲಾಕ್ ಅನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಬಲಾತ್ಕಾರವಾಗಿ ಮೀಟಿ ಮುರಿದು ಮನೆಯ ಒಳಪ್ರವೇಶಿಸಿರುವಂತೆ ಕಂಡುಬಂದಿದೆ. ಮನೆಯೊಳಗಿದ್ದ 62,700/- ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ 3,17,400/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಹಾಗೂ 8 ಸಾವಿರ ರೂಪಾಯಿ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,88,100/- ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment