ಮಂಗಳೂರು, ಮೇ 20, 2024 (ಕರಾವಳಿ ಟೈಮ್ಸ್) : ಶಾಲಾ ಕಂಪೌಂಡ್ ಕುಸಿದು ಬಿದ್ದು 3ನೇ ತರಗತಿಯ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಸಮೀಪದ ನ್ಯೂಪಡ್ಪು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತ ಬಾಲಕಿಯನ್ನು ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ, ನ್ಯೂಪಡ್ಪು ನಿವಾಸಿ ಸಿದ್ದೀಕ್-ಜಮೀಳಾ ದಂಪತಿಯ ಪುತ್ರಿ ಶಾಝಿಯಾ ಬಾನು (7) ಎಂದು ಹೆಸರಿಸಲಾಗಿದೆ.
ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದ ನಿವಾಸಿ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು ಎನ್ನಲಾಗಿದೆ.
ಕಾರ್ಯಕ್ರಮ ಮುಗಿಸಿ ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟು ಕುಸಿದು ಬಿದ್ದು ಬಾಲಕಿ ಶಾಝಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಉಳ್ಳಾಲ ತಾಲೂಕಿನಾದ್ಯಂತ ಸೋಮವಾರ ಪಿರಿಪಿರಿ ಮಳೆಯಾಗುತ್ತಿದ್ದು, ಇದರಿಂದ ಶಾಲಾ ಕಂಪೌಂಡ್ ಸಡಿಲಗೊಂಡು ಕುಸಿದು ಬಿದ್ದಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾ ಪೊಲೀಸರು, ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment