ವೇಣೂರು, ಮೇ 23, 2024 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನ ಅವಧಿಯಲ್ಲಿ ಎರಡು ಪ್ರತ್ಯೇಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪಲಿಕೆ ಮನೆ ನಿವಾಸಿ ಶೈಲೇಶ್ ಅವರ ಮನೆಯಲ್ಲಿ ಬುಧವಾರ ರಾತ್ರಿ ಮನೆಮಂದಿ ಎಂದಿನಂತೆ ಮಲಗಿದ್ದರು. ಗುರುವಾರ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಹಿಂಬದಿಯ ಬಾಗಿಲು ತೆರೆದಿದ್ದು, ಒಳಗಿನ ಚಿಲಕ ಕಿತ್ತು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕೊಠಡಿಯಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಅದರಲ್ಲಿದ್ದ 8.64 ಲಕ್ಷ ರೂಪಾಯಿ ಮೌಲ್ಯದ 18 ಪವನ್ ಚಿನ್ನಾಭರಣ, 30 ಸಾವಿರ ರೂಪಾಯಿ ನಗದು ಹಣ, ಆಧಾರ್ ಕಾರ್ಡ್, ಜೀವವಿಮಾ ಪಾಲಿಸಿ, ಮತದಾರರ ಗುರುತಿನ ಚೀಟಿಗಳಿದ್ದ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕು, ಕರಂಬಾರು ಗ್ರಾಮದ ತೆಂಕಕಾರಂದೂರು, ಮುಂಡೇಲು ಮನೆ ನಿವಾಸಿ ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಗೋದ್ರೆಟ್ ಕಪಾಟಿನ ಬಾಗಿಲು ತೆರೆದು ಸುಮಾರು ಹದಿನಾಲ್ಕೂವರೆ ಗ್ರಾಂ ಚಿನ್ನಾಭರಣ ಹಾಗೂ 3 ಸಾವಿರ ರೂಪಾಯಿ ನಗದು ಹಣವನ್ನು ಕಳವುಗೈಯಲಾಗಿದೆ. ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 75 ಸಾವಿರದ 500 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆಯು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋದ ಕಾರ್ಯ ಆರಂಭಿಸಿದ್ದಾರೆ.
0 comments:
Post a Comment