ವೇಣೂರು, ಎಪ್ರಿಲ್ 08, 2024 (ಕರಾವಳಿ ಟೈಮ್ಸ್) : ಅಕ್ರಮ ಮರಳು ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ವೇಣೂರು ಪೊಲೀಸರು ಪಿಕಪ್ ವಾಹನಗಳ ಸಹಿತ ಮರಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ವೇಣೂರು ಗ್ರಾಮದ ಫಲ್ಗುಣಿ ನದಿಯ ಡ್ಯಾಂ ಬಳಿ ಭಾನುವರ ರಾತ್ರಿ ನಡೆದಿದೆ.
ಭಾನುವಾರ ರಾತ್ರಿ ವೇಣೂರು ಗ್ರಾಮದ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾವಿಸಿದ ವೇಣೂರು ಠಾಣಾ ಪಿಎಸ್ಸೈ ಶ್ರೀಶೈಲ್ ಡಿ ಮುರಗೋಡ್ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ.
ದಾಳಿ ವೇಳೆ ಆರೋಪಿಗಳಾದ ಕರಿಮಣೇಲು ಗ್ರಾಮದ ನಿವಾಸಿ ಸತೀಶ್ (44) ಹಾಗೂ ಮೂಡುಕೋಡಿ ಗ್ರಾಮದ ನಿವಾಸಿ ನವೀನ್ (35) ಎಂಬವರು, ನದಿಯಿಂದ ಮರಳು ತೆಗೆದು, ಕೆಎ12 5150 ಹಾಗೂ ಕೆಎ19 ಎಎ 4650 ನೋಂದಣಿ ಸಂಖ್ಯೆಯ ಪಿಕಪ್ ವಾಹನಗಳಲ್ಲಿ ತಲಾ 30 ಬುಟ್ಟಿಗಳಷ್ಟು ಮರಳನ್ನು ತುಂಬಿಸಿರುವುದು ಕಂಡು ಬಂದಿದೆ. ಆರೋಪಿಗಳು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನದಿಯಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ವಾಹನಗಳನ್ನು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment