ಬಂಟ್ವಾಳ, ಎಪ್ರಿಲ್ 29, 2024 (ಕರಾವಳಿ ಟೈಮ್ಸ್) : ಬಿ ಕಸ್ಬಾ ಗ್ರಾಮದ ಜಕ್ರಿಬೆಟ್ಟು ನೇತ್ರಾವತಿ ನದಿಯ ನಿರ್ಮಾಣ ಹಂತದ ಡ್ಯಾಂ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಹಿಟಾಚಿ, ಟಿಪ್ಪರ್ ಹಾಗೂ ಇತರ ಸಾಮಾಗ್ರಿಗಳ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ಆರೋಪಿಗಳನ್ನು ಅಬ್ದುಲ್ ಮುತಾಲಿಬ್ ಅಲಿಯಾಸ್ ನಾವೂರು ಪುತ್ತಾ ಹಾಗೂ ಇತರರು ಎಂದು ಪೊಲೀಸರು ತಿಳಿಸಿದ್ದಾರೆ.
ಜಕ್ರಿಬೆಟ್ಟು ನೇತ್ರಾವತಿ ನದಿಯ ಡ್ಯಾಂ ಬಳಿ ಅಕ್ರಮ ಮರಳುಗಾರಿಕೆ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಭಾನುವಾರ ರಾತ್ರಿ ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ನದಿ ದಡದಲ್ಲಿ ಮರಳು ರಾಶಿ, 1 ಟಿಪ್ಪರ್ ಲಾರಿ, 1 ಹಿಟಾಚಿ ವಾಹನ ನಿಲ್ಲಿಸಿರುವುದು ಕಂಡು ಬಂದಿದೆ. ಮರಳು ತೆಗೆಯುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ನದಿ ದಡದಲ್ಲಿ ಸುಮಾರು 6-7 ಲೋಡ್ ಮರಳ ರಾಶಿ ಹಾಕಿದ್ದು, ಮರಳನ್ನು ತೆಗೆಯಲು ಬಳಸಿದ ಹಾರೆ, ಪೈಬರ್ ಬುಟ್ಟಿಗಳು ಹಾಗೂ ಇತರ ಸೊತ್ತುಗಳು ಕಂಡು ಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮರಳನ್ನು ಟಿಪ್ಪರ್ ಲಾರಿಗೆ ತುಂಬಿಸಲು ಬಳಸಿದ ಹಿಟಾಚಿ ವಾಹನ, ಮರಳನ್ನು ತುಂಬಿಸಿ ಸಾಗಾಟ ಮಾಡಲು ನಿಲ್ಲಿಸಿದ್ದ ಕೆಎ19 ಸಿ4245 ನೋಂದಣಿ ಸಂಖ್ಯೆಯ ಟಿಪ್ಪರ್, ರಾಶಿ ಹಾಕಿದ್ದ ಮರಳು ಮತ್ತು ಇತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment