ಪುತ್ತೂರು, ಎಪ್ರಿಲ್ 16, 2024 (ಕರಾವಳಿ ಟೈಮ್ಸ್) : ಪುತ್ತೂರು ತಾಲೂಕಿನ ಸಂಪ್ಯ-ಉದಯಗಿರಿ ಅಣ್ಣ ಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೋರ್ವರು ತನ್ನ ಮನೆಯ ಕಂಪೌಂಡ್ ಗೋಡೆಯನ್ನು ರಸ್ತೆಯನ್ನೆ ಆಕ್ರಮಿಸಿ ನಿರ್ಮಿಸಿರುವುದು ರಸ್ತೆಯಲ್ಲಿ ತೀವ್ರ ಇಕ್ಕಟ್ಟಿಗೆ ಕಾರಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ರಸ್ತೆ ಅತಿಕ್ರಮಣ ನಡೆದಿದ್ದು, ವಿಪರ್ಯಾಸವೆಂದರೆ ಪಮಚಾಯತ್ ಕಚೇರಿಯಿಂದ 100 ಮೀಟರ್ ಅಂತರದಲ್ಲೇ ಈ ಕಬಳಿಕೆ ಕೃತ್ಯ ನಡೆದಿದ್ದರೂ ಪಂಚಾಯತ್ ಅಧಿಕಾರಿಗಳು ಮೌನ ವಹಿಸಿರುವುದು ಸ್ಥಳೀಯರಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಇಲ್ಲಿನ ಮನೆ ಮಾಲಿಕ ಮೆಸ್ಕಾಂ ಉದ್ಯೋಗಿಯಾಗಿದ್ದು, ಇವರು ಸಂಪ್ಯದಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿದ್ದು, ಈ ಹಿಂದೆ ಮನೆಯ ಬಲ ಬಾಗಕ್ಕೆ ತಾಗಿಕೊಂಡಿರುವ ದಾರಿಯನ್ನು ಅತಿಕ್ರಮಿಸಿ ದಾರಿಯಲ್ಲೇ ಮೂರು ಅಂತಸ್ತಿನ ಕಟ್ಟಡ ಕಟ್ಟಿ ಬಾಡಿಗೆ ನೀಡುತ್ತಿರುವುದಾಗಿದೆ. ಈತನ ಈ ಅತಿಕ್ರಮಣವನ್ನು ಸಾರ್ವಜನಿಕರು ಪ್ರಶ್ನಿಸದ ಕಾರಣವೋ ಅಥವಾ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳದ ಕಾರಣವೋ ಇದೀಗ ಈತ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ತನ್ನ ಮನೆಯ ಹಿಂದೆ ಇರುವ ಕುಕ್ಕಾಡಿ-ಉದಯಗಿರಿ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯನ್ನೇ ತನ್ನ ಮನೆಯ ಕಂಪೌಂಡ್ ನಿರ್ಮಾಣಕ್ಕೆ ಅತಿಕ್ರಮಿಸಿದ್ದಾನಲ್ಲದೆ ಮತ್ತೆ ಈ ಅತಿಕ್ರಮಣ ಜಾಗದಲ್ಲೂ ಕಟ್ಟಡ ನಿರ್ಮಾಣ ಪ್ರಾರಂಭಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈತನ ಅತಿಕ್ರಮಣ ಮನೋವೃತ್ತಿಗೆ ಕಡಿವಾಣ ಹಾಕದ ಪಂಚಾಯತ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ. ಪಂಚಾಯತ್ ಅಧಿಕಾರಿಗಳು ಈ ಮೃದು ಧೋರಣೆ ಇನ್ನಷ್ಟು ಅತಿಕ್ರಮಣಕಾರರಿಗೆ ಮಣೆ ಹಾಕಿಕೊಟ್ಟಂತಾಗುತ್ತದೆ. ಇದಕ್ಕೆಲ್ಲ ಪಂಚಾಯತ್ ತಕ್ಷಣ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
0 comments:
Post a Comment