ಬಂಟ್ವಾಳ, ಎಪ್ರಿಲ್ 09, 2024 (ಕರಾವಳಿ ಟೈಮ್ಸ್) : 2015 ರ ಆಗಸ್ಟ್ 6 ರಂದು ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ 4 ಮಂದಿ ಆರೋಪಿಗಳ ಅಪರಾಧ ಸಾಬೀತಾಗಿದ್ದು, ನ್ಯಾಯಾಲಯ ಆರೋಪಿಗಳನ್ನು ದೋಷಿಗಳೆಂದು ವಿಧಿಸಿದ್ದು, ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಮುಂದಿನ ದಿನಾಂಕದಂದು ಪ್ರಕಟಿಸುವುದಾಗಿ ತಿಳಿಸಿದೆ.
ಅಪರಾಧ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳನ್ನು ಅನೀಶ್ ಅಲಿಯಾಸ್ ಧನು, ಅಭಿ ಯಾನೆ ಅಭಿಜಿತ್, ಕಿರಣ್ ಹಾಗೂ ವಿಜೇತ್ ಕುಮಾರ್ ಎಂದು ಗುರುತಿಸಲಾಗಿದೆ. ಸಜಿಪ ನಿವಾಸಿ ನಾಸಿರ್ ಎಂಬಾತ ಮೇಲೆ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು.
ಈ ಬಗ್ಗೆ ಆರೋಪಿಗಳ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 200/2015 ಕಲಂ 120(ಬಿ), 341, 324, 307, 302, 201, 34 ರಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದ್ದಾರೆ.
ಸದ್ರಿ ಪ್ರಕರಣದಲ್ಲಿ ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಬೆಳ್ಳಿಯಪ್ಪ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರಾದ ರಾಜು ಪೂಜಾರಿ, ಶೇಖರ್ ಶೆಟ್ಟಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ.
2015 ರ ಆಗಸ್ಟ್ 6 ರಂದು ಸಜಿಪ ಮುನ್ನೂರು ಆಲಾಡಿ ನಿವಾಸಿಗಳಾದ ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸೀರ್ ಅವರು ಮೆಲ್ಕಾರಿನಿಂದ ಸಜಿಪ ಕಡೆಗೆ ಆಟೊ ರಿಕ್ಷಾದಲ್ಲಿ ಸಂಚರಿಸುತ್ತಿದ್ದ ವೇಳೆ ಆರೋಪಿಗಳಾದ ವಿಜೇತ್ ಕುಮಾರ್, ಕಿರಣ್, ಅನೀಶ್ ಆಲಿಯಾಸ್ ಧನು, ಅಭಿ ಯಾನೆ ಅಭಿಜಿತ್ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದು ರಾತ್ರಿ ಸುಮಾರು 10:45ರ ವೇಳೆಗೆ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಮುಹಮ್ಮದ್ ಮುಸ್ತಫ ಮತ್ತು ಮುಹಮ್ಮದ್ ನಾಸಿರ್ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ನಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
0 comments:
Post a Comment