ಸುಳ್ಳು ಹೇಳಿಯೇ ಹತ್ತು ವರ್ಷ ಕಳೆದ ಬಿಜೆಪಿ ಸರಕಾರ : ಅಶ್ವನಿ ಕುಮಾರ್ ರೈ ಆಕ್ರೋಶ
ಮೆಲ್ಕಾರಿನಿಂದ ರೈ ನೇತೃತ್ವದಲ್ಲಿ ಬೃಹತ್ ರೋಡ್ ಶೋ, ಸುಭಾಶ್ ನಗರದಲ್ಲಿ ಸಾರ್ವಜನಿಕ ಪ್ರಚಾರ ಸಭೆ
ಬಂಟ್ವಾಳ, ಎಪ್ರಿಲ್ 24, 2024 (ಕರಾವಳಿ ಟೈಮ್ಸ್) : ‘ಕೈ’ ಗ್ಯಾರಂಟಿಗಳು ಜನರ ಕೈಯಲ್ಲಿದ್ದರೆ, ಮೋದಿ ಗ್ಯಾರಂಟಿ ಕೇವಲ ಬಾಯಲ್ಲಿ ಮಾತ್ರ ಇದೆ. ನುಡಿದಂತೆ ನಡೆಯುವ ಪಕ್ಷ ಹಾಗೂ ಸರಕಾರ ಇದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನೇತೃತ್ವದ ಸರಕಾರ ಮಾತ್ರವಾಗಿದೆ ಎಂದು ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪಾಣೆಮಂಗಳೂರು ವಲಯ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಇವುಗಳ ಸಹಕಾರದೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಪರವಾಗಿ ಬುಧವಾರ ಸಂಜೆ ಮೆಲ್ಕಾರ್ ಜಂಕ್ಷನ್ನಿನಿಂದ ಸಜಿಪಮೂಡ ಗ್ರಾಮದ ಸುಭಾಶ್ ನಗರ (ಬೇಂಕೆ) ವರೆಗೆ ನಡೆದ ರೋಡ್ ಶೋ ಬಳಿಕ ಸುಭಾಶ್ ನಗರ ಜಂಕ್ಷನ್ನಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ಮಾತನಾಡಿದಕ್ಕೂ ಬಂದ ಬಳಿಕ ನಡೆದುಕೊಂಡ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ನುಡಿದಂತೆ ಯಾವುದನ್ನೂ ಮಾಡಿಲ್ಲ. ಬಿಜೆಪಿ ಸರಕಾರ ಸಂಪೂರ್ಣ ವಚನಭ್ರಷ್ಟ ಸರಕಾರವಾಗಿದೆ. ಎರಡು ಕೋಟಿ ಉದ್ಯೋಗ ಇಲ್ಲದೆ ನಿರುದ್ಯೋಗ ಉಂಟಾಗಿದೆ. ಆಧಾರ್, ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಟೀಕಿಸಿ ಅದನ್ನೇ ಮುಂದುವರಿಸಿದರು. ಅವೈಜ್ಞಾನಿಕ ಜಿ ಎಸ್ ಟಿ ಜಾರಿ, ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ಭ್ರಷ್ಟ ಆಗಿದ್ದವರು ಬಿಜೆಪಿ ಸೇರಿದ ಬಳಿಕ ಶುದ್ದರಾಗುವ ಸಿದ್ದಾಂತವನ್ನು ಮೈಗೂಡಿಸಿಕೊಳ್ಳಲಾಗಿದೆ. ಇಂತಹ ಆಡಳಿತ ಮುಂದುವರಿದರೆ ಪ್ರಜಾಪ್ರಭುತ್ವವೇ ಉಳಿದೀತಾ ಎಂಬ ಸಂಶಯ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರು ಯಾವತ್ತೂ ಕೃತಘ್ನರಲ್ಲ. ನಾವು ಏನಿದ್ದರೂ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಪರ ಎಂಬ ಮಾತು ಕ್ಷೇತ್ರ ಸಂಚಾರದ ವೇಳೆ ಮಹಿಳೆಯರಿಂದ ಕೇಳಿ ಬಂದಿದೆ. ಮಹಿಳೆಯರ ಈ ಕೃತಜ್ಞತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದರೆ ಕೇಂದ್ರದ ಗ್ಯಾರಂಟಿಯೂ ನೀಡಿಯೇ ಸಿದ್ದ. ಆ ಮೂಲಕ ನಾವು ಕೂಡಾ ಮಹಿಳೆಯರ ಋಣ ತೀರಿಸುತ್ತೇವೆ ಎಂದು ಭರವಸೆ ನೀಡಿದ ರೈ ಸ್ವಾಭಿಮಾನದ ಬದಕು ಕೊಟ್ಟ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಮುಂದೆಯೂ ಯಾವತ್ತೂ ಜನಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಸಾಲಮನ್ನಾ ಮಾಡುವ ಮೂಲಕ ಜನರನ್ನು ಋಣಮುಕ್ತ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರಕಾರಕ್ಕಿದೆ. ಜನ ನಿತ್ಯ ಜೀವನದಲ್ಲಿ ಪಡೆಯುತ್ತಿರುವ ಎಲ್ಲ ಸೌಲಭ್ಯ ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಯಾರೋ ಮಾಡಿದ ರಸ್ತೆಗೆ ಮೋದಿಗೆ ಪತ್ರ ಬರೆದಿದ್ದೇವೆ ಎಂಬ ನಗೆಪಾಟಲಿನ ಉತ್ತರ ನೀಡುತ್ತಿದ್ದ ಬಿಜೆಪಿಗರ ಪತ್ರ ಬರೆಯುವ ಖಯಾಲಿ ಇದೀಗ ನಿಂತು ಹೋಗಿದೆ. ಅವರ ಪೇಪರೂ ಮುಗಿದಿದೆ. ಪೆನ್ನಿನ ಶಾಯಿಯೂ ಖಾಲಿಯಾಗಿದೆ. ಅವರಿಂದ ಅಭಿವೃದ್ದಿಯೂ ಸಾಧ್ಯವಾಗುತ್ತಿಲ್ಲ ಎಂದು ಅಣಕವಾಡಿದ ರೈ ಜನರನ್ನು ವಿಭಜಿಸಿ ಸಾವು ಹಾಗೂ ಜೈಲು ಹಾದಿ ತೋರಿದ ಸಾಧನೆ ಬಿಟ್ಟರೆ ಬಿಜೆಪಿಗರು ಮಾಡಿದ್ದು ಶೂನ್ಯ ಎಂದು ಟೀಕಿಸಿದರು.
ನ್ಯಾಯವಾದಿಯಾಗಿ, ವಿದ್ಯಾವಂತ ಹಾಗೂ ಬಹುಭಾಷಾ ಬಲ್ಲ ಸಮರ್ಥ ಅಭ್ಯರ್ಥಿ ಕಾಂಗ್ರೆಸ್ ಪಕ್ಷ ಪದ್ಮರಾಜ್ ಆರ್ ಪೂಜಾರಿ ಅವರನ್ನು ನೀಡಿದ್ದು, ಪಾರ್ಲಿಮೆಂಟಿನಲ್ಲಿ ಜನರ ಧ್ವನಿಯನ್ನು ಎತ್ತಿ ಹಿಡಿಯಬಲ್ಲ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದ ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ದನ ಪೂಜಾರಿ ಅವರಿಗೆ 9 ಬಾರಿ, ವಿನಯ ಕುಮಾರ್ ಸೊರೆಕೆ ಅವರಿಗೆ 2 ಬಾರಿ ಸಹಿತ ಇದೀಗ 12ನೇ ಬಾರಿ ಬಿಲ್ಲವರಿಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ನೀಡಿದೆ. ಹೊಟ್ಟೆ ಕಿಚ್ಚು ನಂಜು ಮತ್ಸರದಿಂದ ಮಾತನಾಡುವವರಿಗೆ ಯಾವುದೇ ಮದ್ದಿಲ್ಲ. ಆ ರೋಗ ಇರುವವರು ಸಾಯುವ ತನಕ ನರಲಾಟ ನಡೆಸುವುದು ಅನಿವಾರ್ಯ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಬಡವರ ಕೈಯಿಂದ ದೋಚಿ ಶ್ರೀಮಂತರನ್ನು ಪೆÇೀಷಿಸುವ ಕೆಲಸ ಬಿಜೆಪಿ ಮಾಡಿದರೆ, ಕಾಂಗ್ರೆಸ್ ಪಕ್ಷ ಶ್ರೀಮಂತರಿಂದ ಪಡೆದು ಬಡವರ ಏಳಿಗೆ ಮಾಡಿದ ಕೀರ್ತಿ ಪಡೆದಿದೆ ಎಂದು ರಮಾನಾಥ ರೈ ಹೇಳಿದರು.
ಸುಳ್ಳು ಹೇಳಿ ಹತ್ತು ವರ್ಷ ಕಳೆದದ್ದೇ ಬಿಜೆಪಿ ಸಾಧನೆ : ಅಶ್ವನಿ ಕುಮಾರ್
ಚುನಾವಣಾ ವಾರ್ ರೂಂ ಮುಖ್ಯಸ್ಥ, ನೋಟರಿ-ನ್ಯಾಯವಾದಿ ಎಂ ಅಶ್ವನಿ ರೈ ಮಾತನಾಡಿ, ಬಿಜೆಪಿಗರು ಸುಳ್ಳು ಹೇಳಿಯೇ ಹತ್ತು ವರ್ಷಗಳನ್ನು ಕಳೆದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಇಲ್ಲದೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದರು.
ಕೇವಲ ಭಾವನಾತ್ಮಕ ವಿಷಯಗಳು, ಜಾತಿ-ಧರ್ಮಗಳ ವಿಭಜನೆಯ ಮೂಲಕವೇ ಅಧಿಕಾರ ನಡೆಸಿದ ಬಿಜೆಪಿ ದೇಶವನ್ನು ಅಧೋಗತಿಗೆ ಕೊಂಡುಹೋಗಿದೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ತಕ್ಷಣ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಖ್ಯಾತಿ ಪಡೆದಿದೆ. ಈ ನಿಟ್ಟಿನಲ್ಲಿ ಕಾಂಗೆಸ್ ಕೈ ಬಲಪಡಿಸುವ ಸಲುವಾಗಿ ಪದ್ಮರಾಜ್ ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ಅಭಿವೃದ್ದಿ ಯುಗ ಆರಂಭವಾಗಲಿ ಎಂದು ಕರೆ ನೀಡಿದರು.
ಇದೇ ವೇಳೆ ಸಜಿಪಮೂಡ ವಲಯ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರಿಗೆ ಬೃಹತ್ ಹಾರ ಹಾಕಿ ಗೌರವಿಸಲಾಯಿತು.
ಲೋಕಸಭಾ ಚುನಾವಣೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಯೋಜಕ ಹಾಗೂ ವೀಕ್ಷಕ, ಬುಡಾ ಮಾಜಿ ಅಧ್ಯಕ್ಷ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಸದಸ್ಯ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಮುಖರಾದ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಅನ್ವರ್ ಕರೋಪಾಡಿ, ಮುಹಮ್ಮದ್ ಶರೀಫ್, ಸುದರ್ಶನ್ ಜೈನ್, ಕೆ ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಜನಾರ್ದನ ಚೆಂಡ್ತಿಮಾರ್, ಜಯಂತಿ ಪೂಜಾರಿ, ಶೋಭಾ ಶೆಟ್ಟಿ, ಶೋಭಿತ್ ಪೂಂಜಾ, ಯೂಸುಫ್ ಕರಂದಾಡಿ, ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ, ಚಿತ್ತರಂಜನ್ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಕರೀಂ ಬೊಳ್ಳಾಯಿ, ರಾಜೇಶ್ ರೋಡ್ರಿಗಸ್, ಅಬೂಬಕ್ಕರ್ ಸಿದ್ದೀಕ್, ಶರೀಫ್ ಭೂಯಾ, ಜೆಸಿಂತಾ ಡಿ’ಸೋಜ, ರಝಾಕ್ ಕುಕ್ಕಾಜೆ, ಗಾಯತ್ರಿ ಪ್ರಕಾಶ್, ಶಬೀರ್ ಎಸ್, ಮುಹಮ್ಮದ್ ನಂದಾವರ, ಸಿದ್ದೀಕ್ ಸರವು, ಎಂ ಎಚ್ ಮುಸ್ತಫಾ ಬೋಳಂಗಡಿ, ಅಬ್ದುಲ್ ಖಾದರ್ ಪುತ್ತುಮೋನು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment