ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲಾಲ ಯಾನೆ ಮೂಲ್ಯ ಸಮುದಾಯದ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದು, ಮೂರನೆ ಅತೀ ಹೆಚ್ಚು ಮತದಾರರಿರುವ ಸಮುದಾಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲಾಲ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದರೂ ಅದನ್ನು ಮರೆಮಾಚಿ ಚುನಾವಣಾ ಹೊಸ್ತಿಲಿನ ದಿನಗಳಲ್ಲಿ ಕುಲಾಲ ಸಮುದಾಯವನ್ನು ಕನಿಷ್ಠ ಸಂಖ್ಯೆಯಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಬಂಟ್ವಾಳ ತಾಲೂಕು ಕುಲಾಲ ಸಂಘದ ಮಾಜಿ ಅಧ್ಯಕ್ಷ, ಬಂಟ್ವಾಳ ಯೋಜನಾ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ಸದಾಶಿವ ಬಂಗೇರ ತೀವ್ರ ಖೇದ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ಎಲ್ಲಾ ಹಿಂದುಳಿದ ವರ್ಗದ ಮತದಾರರ ಒಟ್ಟು ಸಂಖ್ಯೆ ಕೇವಲ 40 ಸಾವಿರ ಮಾತ್ರ ಇರುವುದಾಗಿ ತೋರಿಸಿ ಪ್ರಚಾರಪಡಿಸುತ್ತಿರುವುದು ಕಂಡು ಬರುತ್ತಿದೆ. ಇದು ಖಂಡನೀಯ ಎಂದರು.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಅಂದಾಜು ಸುಮಾರು 39 ಸಾವಿರ ಕುಲಾಲ ಮತದಾರರಿದ್ದಾರೆ. ಅದೇ ರೀತಿ ಮೂಡಬಿದಿರೆಯಲ್ಲಿ ಅಂದಾಜು 26 ಸಾವಿರ, ಬೆಳ್ತಂಗಡಿಯಲ್ಲಿ ಅಂದಾಜು 22 ಸಾವಿರ, ಪುತ್ತೂರಿನಲ್ಲಿ ಅಂದಾಜು 19 ಸಾವಿರ, ಸುಳ್ಯದಲ್ಲಿ ಅಂದಾಜು 16 ಸಾವಿರ, ಉಳ್ಳಾಲದಲ್ಲಿ ಅಂದಾಜು 26 ಸಾವಿರ, ಮಂಗಳೂರು ಉತ್ತರದಲ್ಲಿ ಅಂದಾಜು 19 ಸಾವಿರ, ಮಂಗಳೂರು ದಕ್ಷಿಣದಲ್ಲಿ ಅಂದಾಜು 17 ಸಾವಿರ ಸಹಿತ ಒಟ್ಟು ಅಂದಾಜು 1 ಲಕ್ಷ 84 ಸಾವಿರ ಕುಲಾಲ ಸಮುದಾಯದ ಮತದಾರರಿದ್ದಾರೆ ಎಂದ ಸದಾಶಿವ ಬಂಗೇರ, ಕೆಲವೊಂದು ಸೋಶಿಯಲ್ ಮೀಡಿಯ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಆಧಾರ ರಹಿತವಾಗಿ ಕುಲಾಲ ಸಮುದಾಯದ ಮಂದಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಬಗ್ಗೆ ತೋರಿಸುತ್ತಿರುವುದು ಕಂಡು ಬರುತ್ತಿದೆ. ಇದು ಬೇಸರದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಕುಲಾಲ ಯಾನೆ ಮೂಲ್ಯ ಸಮುದಾಯದ ಮುಖಂಡರು ತಮ್ಮ ಸಮುದಾಯದ ಜನಸಂಖ್ಯೆಯನ್ನು ದಾಖಲೆಗಳ ಸಹಿತ ವಿವರಿಸಲು ಇದೀಗ ಸನ್ನಧರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಅಂಕಿ ಅಂಶಗಳನ್ನು ಸಂಗ್ರಹಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಆದುದರಿಂದ ಕುಲಾಲ ಯಾನೆ ಮೂಲ್ಯ ಸಮುದಾಯದ ಜನಸಂಖ್ಯೆಯನ್ನು ವಿವರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಧಾರ ರಹಿತವಾಗಿ ಸಮಾಜದ ಮುಖಂಡರ ಗಮನಕ್ಕೆ ತಾರದೇ ಸಾಮಾಜಿಕ ಜಾಲ ತಾಣಗಳಲ್ಲಾಗಲೀ, ಇತರ ಮಾಧ್ಯಮಗಳಲ್ಲಾಗಲೀ ಪ್ರಚಾರ ಮಾಡುವುದನ್ನು ಕುಲಾಲ ಸಮಾಜ ಖಂಡಿಸುತ್ತದೆ ಎಂದು ಬಂಗೇರ ತಿಳಿಸಿದರು.
ಈ ಸಂದರ್ಭ ಕುಲಾಲ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಸಮುದಾಯ ಪ್ರಮುಖರಾದ ರಮೇಶ್ ಎಂ ಪಣೋಲಿಬೈಲು, ಜಯಗಣೇಶ್ ಜೊತೆಗಿದ್ದರು.
0 comments:
Post a Comment