ಬಂಟ್ವಾಳ, ಎಪ್ರಿಲ್ 23, 2024 (ಕರಾವಳಿ ಟೈಮ್ಸ್) : ರಿಂಗ್ ಅಳವಡಿಸಿದ ಬಾವಿಯ ಹೂಳೆತ್ತಲು ಬಾವಿಗಿಳಿದ ಇಬ್ಬರು ಕಾರ್ಮಿಕರು ಉಸಿರಾಟದ ತೊಂದರೆಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಧ್ಯಾಹ್ನದ ವೇಳೆ ಸಂಭವಿಸಿದೆ.
ಮೃತ ಕಾರ್ಮಿಕರನ್ನು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ನಿವಾಸಿ ಕುಕ್ಕಿಲ ಇಬ್ಬು ಅಲಿಯಾಸ್ ಕೆ ಎಂ ಇಬ್ರಾಹಿಂ (38) ಹಾಗೂ ಸಾಲೆತ್ತೂರು ಸಮೀಪದ ಮಲಾರು ನಿವಾಸಿ ಮಹಮ್ಮದ್ ಅಲಿ (24) ಎಂದು ಹೆಸರಿಸಲಾಗಿದೆ. ಕೆ ಎಂ ಇಬ್ರಾಹಿಂ ಅವರು ಬಾವಿಗೆ ರಿಂಗ್ ಇಳಿಸುವ ಕಂಟ್ರಾಕ್ಟ್ ಹಾಗೂ ಮೇಸ್ತ್ರಿ ಕೆಲಸಗಾರನಾಗಿದ್ದು, ಮಂಗಳವಾರ ಪಡಿಬಾಗಿಲು ಎಂಬಲ್ಲಿನ ನಿವಾಸಿ ವೆಂಕಟರಾವ್ ಅವರ ಜಮೀನಿನಲ್ಲಿರುವ ರಿಂಗ್ ಅಳವಡಿಸಿದ ಬಾವಿಯ ಹೂಳೆತ್ತಲು ಕೆಲಸಗಾರರಾದ ಮಹಮ್ಮದ್ ಅಲಿ, ಅಬ್ದುಲ್ ರಹೀಂ ಹಾಗೂ ಸಯ್ಯದ್ ಎಂಬವರನ್ನು ಜೊತೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ವೇಳೆಗೆ ಸುಮಾರು 25 ಅಡಿ ಆಳದ ಬಾವಿಯ ಹೂಳೆತ್ತಲು ಮುಹಮ್ಮದ್ ಅಲಿ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದಾಗ ಆಮ್ಲಜನಕ ಕೊರತೆಯಿಂದಾಗಿ ಉಸಿರಾಟದ ತೊಂದರೆಗೆ ಸಿಲುಕಿದ್ದಾರೆ. ಈ ಸಂದರ್ಭ ಅವರ ರಕ್ಷಣೆಗಾಗಿ ಇಬ್ರಾಹಿಂ ಕೂಡಾ ಬಾವಿಗೆ ಇಳಿದಾಗ ಇಬ್ಬರಿಗೂ ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಉಂಟಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಸಾರ್ವಜನಿಕರು ಇಬ್ಬರನ್ನೂ ಮೇಲಕ್ಕೆತ್ತಿ ಅಂಬ್ಯುಲೆನ್ಸ್ ಮೂಲಕ ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಬ್ರಾಹಿಂ ಅವರು ಕಳೆದ 20 ವರ್ಷಗಳಿಂದಲೂ ಅಧಿಕ ಸಮಯಗಳಿಂದ ಬಾವಿಗೆ ರಿಂಗ್ ಇಳಿಸುವ ಮೊದಲಾದ ಕೆಲಸ ನಿರ್ವಹಿಸುತ್ತಿರುವ ಪರಿಣತ ಕಾರ್ಮಿಕರಾಗಿದ್ದು, ಸಾವಿರಾರು ಕೆರೆ-ಬಾವಿಗಳ ಕೆಲಸ ಮಾಡಿದ ಅನುಭವಿಯಾಗಿದ್ದರೂ ಈ ದುರಂತ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮೃತ ಇಬ್ರಾಹಿಂ ಅವರ ಸಹೋದ ಸುಲೈಮಾನ್ ಅವರ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 20/2024 ಕಲಂ 174 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment