ಕಳೆದ ಬಾರಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹರಿದು ಬಿಸಾಕಿದ್ದ ಬಿಜೆಪಿಗರು ಇದೀಗ ಹುಡುಕಿ ಹೆಕ್ಕಿ ತಂದು ಗ್ಯಾರಂಟಿ ಫಲ ಉಣ್ಣುತ್ತಿದ್ದಾರೆ : ಕಾಂಗ್ರೆಸ್ ಅಭ್ಯರ್ಥಿ ಲೇವಡಿ
ಬಂಟ್ವಾಳ, ಎಪ್ರಿಲ್ 19, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಘೋಷಣೆಯಾದ ಆರಂಭದಲ್ಲಿ 4 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿಗರು ಇದೀಗ 75 ಸಾವಿರ ಮತಗಳ ಹಿನ್ನಡೆಯಲಿದ್ದೇವೆ ಎಂಬ ಹಂತಕ್ಕೆ ಬಂದು ಮುಟ್ಟಿದ್ದಾರೆ ಎಂಬ ಮಾಹಿತಿ ಬಿಜೆಪಿ ಪಡಸಾಲೆಯಿಂದಲೇ ನಮಗೆ ಬಂದಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ವಿವಿಧೆಡೆ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸಂಜೆ ಬಿ ಸಿ ರೋಡಿನಲ್ಲಿ ರೋಡ್ ಶೋ ನಡೆಸಿದ ನಂತರ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರಂಭದಲ್ಲಿ 4 ಲಕ್ಷ ಮತಗಳ ಅಂತರ, ಬಳಿಕ ಅದು 3 ಲಕ್ಷ, ನಂತರ 2 ಲಕ್ಷ, 1 ಲಕ್ಷ ಮತಗಳ ಅಂತರಕ್ಕೆ ಕುಸಿದು ಇದೀಗ ಕೊನೆ ಹಂತಕ್ಕೆ ಬರುವಾಗ 75 ಸಾವಿರ ಮತಗಳ ಹಿನ್ನಡೆಯಲಿದ್ದೇವೆ. ಆದರೂ ಅದನ್ನು ಬಾಕಿ ಉಳಿದಿರುವ ಒಂದು ವಾರದಲ್ಲಿ ಹೇಗಾದರೂ ಬ್ಯಾಲೆನ್ಸ್ ಮಾಡಿ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂಬ ಹಂತಕ್ಕೆ ಬಿಜೆಪಿಗರು ಬಂದಿದ್ದಾರೆ ಎಂಬ ಮಾಹಿತಿ ಕಮಲ ಪಾಳಯದಿಂದಲೇ ನಮಗೆ ಬಂದಿದ್ದು, ಇದು ನಮ್ಮ ಗೆಲುವು ಈ ಬಾರಿ ಗ್ಯಾರಂಟಿ ಎಂಬ ವಿಶ್ವಾಸ ನಮ್ಮ ಪಾಲಿಗೆ ಬಂದಿದೆ ಎಂದು ಗೆಲುವಿನ ಭರವಸೆ ವ್ಯಕ್ತಪಡಿಸಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ, ಇದೆಲ್ಲ ಬೋಗಸ್, ಸುಳ್ಳು ಭರವಸೆ ಎಂದು ನಮ್ಮ ಗ್ಯಾರಂಟಿ ಕಾರ್ಡ್ ಗಳನ್ನು ಹರಿದು ಬಿಸಾಕಿದ್ದ ಬಿಜೆಪಿಗರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳ ಅಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದರಿಂದ ಈ ಬಾರಿ ಗ್ಯಾರಂಟಿ ಕಾರ್ಡ್ ಬಿಸಾಡಿರಿ ಎಂದು ಯಾವುದೇ ಬಿಜೆಪಿಗರು ಹೇಳುವ ಧೈರ್ಯ ತೋರುತ್ತಿಲ್ಲ. ಕಾರಣ ಕಳೆದ ಬಾರಿ ಹರಿದು ಬಿಸಾಕಿದ ಗ್ಯಾರಂಟಿ ಕಾರ್ಡ್ ಗಳನ್ನು ಮತ್ತೆ ಹುಡುಕಿ ತಂದು ಗ್ಯಾರಂಟಿಯ ಫಲ ಉಣ್ಣುತ್ತಿದ್ದಾರೆ ಎಂದು ಲೇವಡಿ ಮಾಡಿದ ಪದ್ಮರಾಜ್ ಇದೀಗ ಸೋಲು ಖಚಿತ ಎಂದರಿತ ಬಿಜೆಪಿಗರು ಮತ್ತದೇ ಅಪಪ್ರಚಾರ-ಆಣೆ ಪ್ರಮಾಣ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಇದೀಗ ಜನ ಪ್ರಬುದ್ದರಾಗಿದ್ದು, ಇವರ ಯಾವುದೇ ನೀಚ ರಾಜಕೀಯಕ್ಕೆ ಬಲಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ದಿಯ ವಿಚಾರದಲ್ಲಿ ಚರ್ಚೆ ಮಾಡಿದರೆ ಮತಗಳು ಬರುವುದಿಲ್ಲ ಎಂಬುದನ್ನು ಅರಿತ ಬಿಜೆಪಿಗರು ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಕೊಡಲಿ ಏಟು ಕೊಟ್ಟು ಸಂಘರ್ಷ ಉಂಟು ಮಾಡಿ ಅಧಿಕಾರದ ರುಚಿ ಸವಿದಿದ್ದಾರೆ. ಹಿಂದುತ್ವ-ಮೋದಿ ಬಿಟ್ಟರೆ ಬಿಜೆಪಿಗರ ಬಳಿ ಇತರ ಯಾವುದೇ ಅಭಿವೃದ್ದಿ ಪರ ವಿಚಾರಗಳೇ ಇಲ್ಲದಾಗಿದೆ ಎಂದ ಕೈ ಅಭ್ಯರ್ಥಿ ಬಿಜೆಪಿಗರ ನಕಲಿ ಹಿಂದುತ್ವಕ್ಕೆ ಪದ್ಮರಾಜ್ ಓರ್ವ ನೈಜ ಹಿಂದುವಾಗಿ ಸವಾಲೆಸೆಯುತ್ತೇನೆ. ಪದ್ಮರಾಜ್ ಕೂಡಾ ಓರ್ವ ಹಿಂದೂವಾಗಿದ್ದು, ಎಲ್ಲರನ್ನೂ ಪ್ರೀತಿಸುವ, ಸೌಹಾರ್ದತೆ ಉಂಟುಮಾಡುವ ಹಿಂದೂ, ಪರಸ್ಪರ ಜೋಡಿಸುವ ಹಿಂದೂವಾಗಿದ್ದೇನೆಯೇ ಹೊರತು ಜನರನ್ನು ವಿಭಜಿಸುವ ಹಿಂದೂವಲ್ಲ ಎಂದು ಎದೆ ತಟ್ಟಿದರು. ಜಿಲ್ಲೆಯಲ್ಲಿ ಮತ ಸೌಹಾರ್ದತೆಗೆ ಮರಳಿ ತರಲು ಕಾಂಗ್ರೆಸ್ ಗೆಲುವು ಅನಿವಾರ್ಯ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬದ್ದತೆಯಿಂದ ಅನುಷ್ಠಾನಕ್ಕೆ ತಂದ ಕಾಂಗ್ರೆಸ್ ಕೇಂದ್ರದಲ್ಲೂ ಜನಪರ ಯೋಜನೆಗಳನ್ನು ಜಾರಿ ಮಾಡಲು ಈಗಾಗಲೇ ಗ್ಯಾರಂಟಿಗಳನ್ನು ಘೋಷಿಸಲಾಗಿದೆ ಎಂದರು.
ಚುನಾವಣಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಮಂತ್ರಿ ಬಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷದ ಗತಕಾಲದ ಎಂಪಿಗಳನ್ನು ಬದಿಗಿರಿಸಿ ತೀರಾ ಇತ್ತೀಚೆಗಿನ ಸಂಸದರಾದ ಆಸ್ಕರ್ ಫೆರ್ನಾಂಡಿಸ್ ಹಾಗೂ ಜನಾರ್ದನ ಪೂಜಾರಿ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳನ್ನು ಬಿಟ್ಟರೆ ಬಳಿಕದ ಬಿಜೆಪಿ ಸಂಸದರಿಂದ ಯಾವುದೇ ಅಭಿವೃದ್ದಿ ಕಾರ್ಯಗಳೇ ಆಗಿಲ್ಲ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನಂಬರ್ ಒನ್ ಸಂಸದ ಎಂದು ಸ್ವಯಂಘೋಷಿಸಿಕೊಳ್ಳಲಾಗಿದ್ದರೂ ಇದೀಗ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ನಳಿನ್ ಕುಮಾರ್ ಕಟೀಲ್ ಅವರಿಗೆ ಸೀಟ್ ಕೊಡದೆ ಅವರ ಶೂನ್ಯತನವನ್ನು ಸ್ವತಃ ಪಕ್ಷವೇ ಒಪ್ಪಿಕೊಂಡಿದೆ ಎಂದು ವಿಮರ್ಶಿಸಿದ ರಮಾನಾಥ ರೈ, ಹತ್ಯಾ ರಾಜಕೀಯ, ಕೋಮುವಾದವನ್ನು ನಾವೆಲ್ಲ ಖಂಡಿಸಬೇಕಾಗಿದೆ ಎಂದರು. ಅಭಿವೃದ್ದಿ ಹೊಂದಿದ ಜಿಲ್ಲೆ, ಸಾಮರಸ್ಯದ ಜಿಲ್ಲೆ, ಬುದ್ದಿವಂತರ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದ ಈ ಜಿಲ್ಲೆ ಕೋಮುಸೂಕ್ಷ್ಮ ಜಿಲ್ಲೆ ಎಂಬ ಕುಖ್ಯಾತಿ ಪಡೆದಿರುವುದು ಬಿಜೆಪಿ ಸಂಸದರ ಕಾಲದಲ್ಲಿ ಎಂದು ಅಣಕವಾಡಿದರು.
ಜಿಲ್ಲೆಯಲ್ಲಿ ಈ ಹಿಂದಿನಂತೆ ಅಭಿವೃದ್ದಿ ಪರ ಚರ್ಚೆ ಮತ್ತೆ ಆರಂಭವಾಗಬೇಕಿದೆ. ಭಾವನಾತ್ಮಕ ಚರ್ಚೆಗಳು ನಿಲ್ಲಬೇಕಾಗಿದೆ. ಜಿಲ್ಲೆಯ ಅಭಿವೃದ್ದಿ ಹಿಂದೆಯೂ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯವಾಗಿದೆ. ಇನ್ನು ಮುಂದೆಯೂ ಕಾಂಗ್ರೆಸ್ ಸಂಸದರಿಂದ ಮಾತ್ರ ಸಾಧ್ಯ ಎಂಬುದು ಸಾಬೀತಾಗಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪಾರ್ಲಿಮೆಂಟಿನಲ್ಲಿ ಶಕ್ತಿಯುತವಾಗಿ ಮಾತನಾಡಲು ಬಹುಭಾಷಾ ಪರಿಣತ ನ್ಯಾಯವಾದಿ ಪದ್ಮರಾಜ್ ಆರ್ ಪೂಜಾರಿ ಅವರನ್ನು ಸಂಸದರಾಗಿ ಆಯ್ಕೆ ಮಾಡುವ ಅನಿವಾರ್ಯತೆ ಜಿಲ್ಲೆಯ ಜನರ ಮೇಲಿದೆ ಎಂದು ರಮಾನಾಥ ರೈ ಕೋರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಈ ಬಾರಿಯ ಚುನಾವಣೆ ಸಂವಿಧಾನ, ಪ್ರಜಾಪ್ರಭುತ್ವ ಉಳಿವಿನ ಚುನಾವಣೆ, ಬೆಲೆ ಏರಿಕೆ, ಸಂವಿಧಾನ ಬದಲಾಯಿಸುವ ಸರಕಾವನ್ನು ಕಿತ್ತೊಗೆಯಬೇಕಾದ ಚುನಾವಣೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಬೇಕಾದ ಸಮರ್ಥ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಸಮರ್ಥ ಅಭ್ಯರ್ಥಿ ಪದ್ಮರಾಜ್ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಚುನಾವಣಾ ವಾರ್ ರೂಂ ಮುಖ್ಯಸ್ಥ ಎಂ ಅಶ್ವನಿ ಕುಮಾರ್ ರೈ, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಪದ್ಮನಾಭ ರೈ, ಜಗದೀಶ್ ಕೊಯಿಲ, ಬೇಬಿ ಕುಂದರ್, ಜಯಂತಿ ವಿ ಪೂಜಾರಿ, ಜೋಸ್ಪಿನ್ ಡಿಸೋಜ, ಅನ್ವರ ಕರೋಪಾಡಿ, ಮೋಹನ್ ಕಲ್ಮಿಂಜ, ನಾರಾಯಣ ನಾಯ್ಕ ಮೊದಲಾದವರು ಭಾಗವಹಿಸಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು ವಂದಿಸಿದರು.
ಬೆಳಿಗ್ಗೆ 8 ಗಂಟಗೆ ಪೆÇಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ಹೊರಟ ಚುನಾವಣಾ ಪ್ರಚಾರ ಯಾತ್ರೆ ಪೆÇಳಲಿ ಜಂಕ್ಷನ್, ಬಡಬಗಬೆಳ್ಳೂರು (ಕೊಳತ್ತಮಜಲು), ಅಮ್ಮುಂಜೆ-ಬಡಕಬೈಲು ಜಂಕ್ಷನ್, ಕಳ್ಳಿಗೆ-ಬ್ರಹ್ಮರಕೂಟ್ಲು, ಮೊಡಂಕಾಪು ಚರ್ಚ್, ನರಿಕೊಂಬು-ಮೊಗರ್ನಾಡು, ಶಂಭೂರು-ಶೇಡಿಗುರಿ ಜಂಕ್ಷನ್, ಬಾಳ್ತಿಲ-ನೀರಪಾದೆ ಜಂಕ್ಷನ್, ಬರಿಮಾರು-ಸೂರಿಕುಮೇರು ಜಂಕ್ಷನ್, ಮಾಣಿ ಜಂಕ್ಷನ್, ಪೆರಾಜೆ-ಬುಡೋಳಿ ಜಂಕ್ಷನ್, ಕಡೇಶಿವಾಲಯ-ಪೆರ್ಲಾಪು ಜಂಕ್ಷನ್, ನೆಟ್ಲಮುಡ್ನೂರು-ನೇರಳಕಟ್ಟೆ ಜಂಕ್ಷನ್, ಅನಂತಾಡಿ-ಗೋಳಿಕಟ್ಟೆ ಜಂಕ್ಷನ್, ವೀರಕಂಭ-ಮಂಗಿಲಪದವು ಜಂಕ್ಷನ್, ಗೋಳ್ತಮಜಲು-ಕಲ್ಲಡ್ಕ ಜಂಕ್ಷನ್, ಅಮ್ಟೂರು ಜಂಕ್ಷನ್, ಸಜಿಪಮೂಡ-ಬೊಳ್ಳಾಯಿ ಜಂಕ್ಷನ್, ಕರೋಪಾಡಿ-ಮಿತನಡ್ಕ ಜಂಕ್ಷನ್, ಕನ್ಯಾನ ಜಂಕ್ಷನ್, ವಿಟ್ಲಪಡ್ನೂರು-ಕೊಡುಂಗಾಯಿ ಜಂಕ್ಷನ್, ಕೊಳ್ನಾಡು-ಸಾಲೆತ್ತೂರು ಜಂಕ್ಷನ್, ಬೋಳಂತೂರು-ಎನ್ ಸಿ ರೋಡು ಜಂಕ್ಷನ್, ಮಂಚಿ-ಕುಕ್ಕಾಜೆ ಜಂಕ್ಷನ್, ಸಜಿಪಮುನ್ನೂರು-ನಂದಾವರ ಜಂಕ್ಷನ್, ಪಾಣೆಮಂಗಳೂರು-ಮೆಲ್ಕಾರ್ ಜಂಕ್ಷನ್, ಬಿ ಮೂಡ-ಮಿತ್ತಬೈಲು ಮಸೀದಿ, ಬಿ ಸಿ ರೋಡು ಪೇಟೆಯಲ್ಲಿ ರೋಡ್ ಶೋ ಬಳಿಕ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಸಾರ್ವಜನಿಕ ಪ್ರಚಾರ ಸಭೆಯ ಮೂಲಕ ಸಮಾಪ್ತಿಗೊಂಡಿತು.
0 comments:
Post a Comment