ಬಂಟ್ವಾಳ, ಎಪ್ರಿಲ್ 21, 2024 (ಕರಾವಳಿ ಟೈಮ್ಸ್) : ಈಜಾಟಕ್ಕೆಂದು ನೇತ್ರಾವತಿ ನದಿಗಿಳಿದ ಶಾಲಾ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡೇಶ್ವಾಲ್ಯ ಗ್ರಾಮದ ಕೆಮ್ಮನ್ ಪಳಿಕೆ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಶಹೀರ್ ಎಂಬವರ ಪುತ್ರ, ಕೆಮ್ಮನ್ ಪಳಿಕೆ ಶಾಲಾ ವಿದ್ಯಾರ್ಥಿ ಸುಹೈಲ್ (12) ಎಂಬಾತನೇ ನೀರುಪಾಲಾದ ಬಾಲಕ. ಶನಿವಾರ ಸಂಜೆ ಸುಹೈಲ್ ಮನೆಯಿಂದ ಸ್ಥಳೀಯ ಕೋಳಿ ಅಂಗಡಿಗೆ ಬಂದು ಕೋಳಿ ಮಾಂಸ ಖರೀದಿಸಿ ಮನೆಗೆ ತಲುಪಿಸಿ ಬಳಿಕ ಸ್ನಾನಕ್ಕೆಂದು ಸಮೀಪದ ನೇತ್ರಾವತಿ ನದಿಗೆ ತೆರಳಿದ್ದ ಎನ್ನಲಾಗಿದೆ. ನೀರಿನಲ್ಲಿ ಈಜಾಟ ನಡೆಸುತ್ತಿದ್ದ ವೇಳೆ ಆಯತಪ್ಪಿ ನೀರಿನಲ್ಲಿ ಮುಳುಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕೂಲಿ ಕಾರ್ಮಿಕ ಶಹೀರ್ ಅವರ ಇಬ್ಬರು ಮಕ್ಕಳಲ್ಲಿ ಸುಹೈಲ್ ಹಿರಿಯವನಾಗಿದ್ದು, ಸ್ಥಳೀಯ ಕೆಮ್ಮಾನ್ ಪಳಿಕೆ ಶಾಲೆಯಲ್ಲಿ 6ನೇ ತರಗತಿ ತೇರ್ಗಡೆ ಹೊಂದಿದ್ದ ಎನ್ನಲಾಗಿದೆ. ಮೃತ ಸುಹೈಲ್ ತಂದೆ-ತಾಯಿ, ಕಿರಿಯ ಸಹೋದರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿ 10.30ರ ವೇಳೆಗೆ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಕೆಮ್ಮಾನ್ ಕಜೆ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
0 comments:
Post a Comment