ಬಂಟ್ವಾಳ, ಎಪ್ರಿಲ್ 01, 2024 (ಕರಾವಳಿ ಟೈಮ್ಸ್) : ಬಡ ಕುಟುಂಬದ ಮಹಿಳೆಯೋರ್ವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಎಲಿಯನಡುಗೋಡು ಗ್ರಾಮದ ಉಪ್ಪಿರ ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ಮೋನಮ್ಮ ಅವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಇವರು ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿ ಉಂಟಾದ ಬೆಂಕಿಯಿಂದ ಭಾರೀ ಹೊಗೆ ಸ್ಥಳೀಯರು ಗಮನಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತಗಡು ಶೀಟಿನ ಮನೆ ಸಂಪೂರ್ಣ ಸುಟ್ಟು ಹೋಗಿದೆ ಎನ್ನಲಾಗಿದೆ.
ಅವಘಡದಿಂದ ಮೋನಮ್ಮ ಅವರ ಪದವಿ ವ್ಯಾಸಂಗ ಮಾಡುತ್ತಿರುವ ಪುತ್ರಿಯ ವಾರ್ಷಿಕ ಪರೀಕ್ಷೆಯ ಹಾಲ್ ಟಿಕೆಟ್ ಕೂಡಾ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯೆ ಶೋಭಾ, ಪಿಡಿಒ ಪದ್ಮನಾಭ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 comments:
Post a Comment