ಬಂಟ್ವಾಳ, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸಿ, ದ್ವೇಷಾಸೂಯೆ ಬಿಟ್ಟು ಸ್ನೇಹ-ಬಾಂಧವ್ಯ ವೃದ್ದಿಸಿಕೊಳ್ಳಿ, ರಹಸ್ಯ ದಾನಗಳನ್ನು ಹೆಚ್ಚಿಸಿರಿ, ಇವುಗಳಿಂದ ಜೀವನವೂ ಧನ್ಯಗೊಳ್ಳುವುದರ ಜೊತೆಗೆ ಸಾಮಾಜಿಕ ಒಳಿತುಗಳೂ ಉಂಟಾಗುತ್ತದೆ ಹಾಗೂ ಪಾರತ್ರಿಕ ವಿಜಯಕ್ಕೂ ರಹದಾರಿ, ಇದುವೇ ಪವಿತ್ರ ಈದುಲ್ ಫಿತ್ರ್ ಹಬ್ಬದ ಮಹತ್ತರವಾದ ಸಂದೇಶ ಎಂದು ಅಲ್‍ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.
ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಬುಧವಾರ ವಿಶೇಷ ಈದ್ ನಮಾಝ್ ಹಾಗೂ ಖುತ್ವಾ ನೇತೃತ್ವ ವಹಿಸಿದ ಬಳಿಕ ಈದ್ ಸಂದೇಶ ನೀಡಿದ ಅವರು, ಕಾಲವು ಅಂತಿಮ ಘಟಕ್ಕೆ ತಲುಪುತ್ತಿದ್ದು, ಮನುಷ್ಯರ ನಡುವೆ ದ್ವೇಷಾಸೂಯೆ ಸಾಧಿಸುವಷ್ಟು ಆಯುಷ್ಯ ದೀರ್ಘವಾಗಿಲ್ಲ. ಪರಸ್ಪರ ಸ್ನೇಹ-ಪ್ರೀತಿ, ಸಹಬಾಳ್ವೆಯಿಂದ ಮನುಕುಲವನ್ನು ಗೌರವಿಸಿ ಜೀವಿಸುವ ಮೂಲಕ ಜೀವನವನ್ನು ಧನ್ಯಗೊಳಿಸಿ ಎಂದು ಕರೆ ನೀಡಿದರು.
ಮರಣವು ಅಧಿಕಗೊಳ್ಳುತ್ತಿರುವ ಈ ಸನ್ನಿವೇಶದಲ್ಲಿ ಲೋಕಾಡಂಬರಗಳಿಂದ ಸ್ವೇಚ್ಛಾಚಾರಗಳಿಂದ ಜೀವಿಸುವ ಬದಲು ಸಮಾಜದ ಬಡ-ಬಗ್ಗರ ಬಗ್ಗೆ, ಕಟ್ಟ ಕಡೆಯ ಜನರ ಬಗ್ಗೆ ಕರುಣೆ ತೋರಿ ಜೀವಿಸಿದಾಗ ಮನಸ್ಸಂತೋಷದ ಜೊತೆಗೆ ಇಹ-ಪರ ವಿಜಯ ಸಂಪಾದಿಸಲು ಸಾಧ್ಯ ಎಂದವರು ಇದೇ ವೇಳೆ ತಾಕೀತು ಮಾಡಿದರು.
ಈದ್ ಪ್ರಾರ್ಥನೆ, ಖುತ್ಬಾ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭ ಹಾರೈಸುವ ಮೂಲಕ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
0 comments:
Post a Comment