ಬಂಟ್ವಾಳ, ಎಪ್ರಿಲ್ 20, 2024 (ಕರಾವಳಿ ಟೈಮ್ಸ್) : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಗ್ಯಾರಂಟಿ ಯೋಜನೆಗಳು ಆನೆ ಬಲ ನೀಡಿದೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಈಗಾಗಲೇ ರಾಜ್ಯದ ಪ್ರತೀ ಮನೆಗೂ ತಲುಪಿದ್ದು, ಜನ ಸಾಮಾನ್ಯ ಇದರ ಪೂರ್ಣ ಪ್ರಯೋಜನ ಪಡೆದು ಜೀವನ ಧನ್ಯಗೊಳಿಸಿರುವ ಹಿನ್ನಲೆಯಲ್ಲಿ ಮತದಾರ ಧನ್ಯತಾಭಾವದಿಂದ ಕಾಂಗ್ರೆಸ್ ಪಕ್ಷವನ್ನು ಹರಸಲಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರ ಅವರು, ಬಿಜೆಪಿ ಇನ್ನೂ ಕೂಡಾ ಕ್ಷುಲ್ಲಕ ಹಾಗೂ ಭಾವನಾತ್ಮಕ ವಿಷಯಗಳನ್ನೇ ಚುನಾವಣಾ ವಿಷಯವನ್ನಾಗಿಸಿಕೊಂಡು ಜನರ ಬಳಿ ತೆರಳುತ್ತಿದ್ದು, ಜನರಿಂದ ತಿರಸ್ಕಾರ ಎದುರಿಸುತ್ತಿದ್ದಾರೆ ಎಂದರು.
ಸ್ವತಃ ಪಕ್ಷದ ಕಾರ್ಯಕರ್ತರೇ ಬಿಜೆಪಿ ನಾಯಕರ ವಿರುದ್ದ ತಿರುಗಿ ಬಿದ್ದಿದ್ದು, ಪರಿಣಾಮ ಚುನಾವಣೆಯಲ್ಲಿ ಸಂಪೂರ್ಣವಾಗಿ ಮಕಾಡೆ ಮಲಗುತ್ತೇವೆ ಎಂದರಿತ ಬಿಜೆಪಿಗರು ಇದೀಗ ಕಾಂಗ್ರೆಸ್ ವಿರುದ್ದ ಅವರು ಹಿಂದೂ ವಿರೋಧಿಗಳು, ಅವರು ಜೈ ಭಾರತ್ ಮಾತಾ ಕೀ ಜೈ ಹೇಳುವುದಿಲ್ಲ ಎಂಬಿತ್ಯಾದಿ ಭಾವನಾತ್ಮಕ ವಿಷಯಗಳನ್ನೇ ಮತ್ತೆ ಚುನಾವಣಾ ವಿಷಯನ್ನಾಗಿಸಿ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅದ್ಯಾವುದೂ ಜನತೆಯನ್ನು ಬಾಧಿಸುವುದಿಲ್ಲ ಎಂದು ಗುಂಡೂರಾವ್ ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಪ್ರಚಾರ ಉಸ್ತುವಾರಿ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ, ಚುನಾವಣಾ ವಾರ್ ರೂಂ ಮುಖ್ಯಸ್ಥ ಜೊತೆಗಿದರು. ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲವೀನಾ ವಿಲ್ಮಾ ಮೋರಸ್ ಹಾಗೂ ಜಯಂತಿ ವಿ ಪೂಜಾರಿ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಮನಪಾ ಸದಸ್ಯ ವಿನಯರಾಜ್, ಪ್ರಮುಖರಾದ ಶುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಪದ್ಮನಾಭ ರೈ, ಇಬ್ರಾಹಿಂ ನವಾಝ್ ಬಡಕಬೈಲು, ಮಲ್ಲಿಕಾ ವಿ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment