ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ, ಪಿಎಂ, ಸಿಎಂ ಸಹಿತ ಹಲವು ಗಣ್ಯರ ಸಂತಾಪ - Karavali Times ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ, ಪಿಎಂ, ಸಿಎಂ ಸಹಿತ ಹಲವು ಗಣ್ಯರ ಸಂತಾಪ - Karavali Times

728x90

28 April 2024

ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ, ಪಿಎಂ, ಸಿಎಂ ಸಹಿತ ಹಲವು ಗಣ್ಯರ ಸಂತಾಪ

ಬೆಂಗಳೂರು, ಎಪ್ರಿಲ್ 29, 2024 (ಕರಾವಳಿ ಟೈಮ್ಸ್) : ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಕೇಂದ್ರದ ಮಾಜಿ ಸಚಿವ ವಿ ಶ್ರೀನಿವಾಸ ಪ್ರಸಾದ್ (75) ಅವರು ಭಾನುವಾರ ಮಧ್ಯ ರಾತ್ರಿ 1.20ರ ವೇಳೆಗೆ ಬೆಂಗಳೂರಿನ ಮಣಿಪಾಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 

ಇತ್ತೀಚೆಗೆ ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮೂರು ದಿನಗಳ ಹಿಂದೆ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅನಾರೋಗ್ಯ ಉಲ್ಭಣಿಸಿ ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರು, ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಅವರು ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದದ್ದ ಇವರು ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಮೂಲತಃ ಮೈಸೂರಿನ ಅಶೋಕಪುರಂನವರಾದ ಶ್ರೀನಿವಾಸಪ್ರಸಾದ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಮೈಸೂರಿನ ಅಶೋಕಪುರಂನಲ್ಲಿ ಆಗಸ್ಟ್ 6, 1947 ರಂದು ಜನಿಸಿದ ಪ್ರಸಾದ್ ಅವರ ರಾಜಕೀಯ ಪ್ರಯಾಣವು ಮಹತ್ವದ ಮೈಲಿಗಲ್ಲುಗಳಿಂದ ಗುರುತಿಸಲ್ಪಟ್ಟಿದೆ. ಅವರು ಚಾಮರಾಜನಗರ ಕ್ಷೇತ್ರವನ್ನು ಏಳು ಅವಧಿಗೆ ಸಂಸದರಾಗಿ ಪ್ರತಿನಿಧಿಸಿದ್ದರು ಮತ್ತು ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿದ್ದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿದ್ದ ಪ್ರಸಾದ್ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ನಿಭಾಯಿಸಿದ್ದರು. 

ಡಿಸೆಂಬರ್ 2016ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು 2019ರಲ್ಲಿ ಮತ್ತೆ ಚಾಮರಾಜನಗರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಮತದಾರರಲ್ಲಿ ತಮ್ಮ ನಿರಂತರ ಜನಪ್ರಿಯತೆಯನ್ನು ಕಂಡುಕೊಂಡಿದ್ದರು.

ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಮಣಿಪಾಲ ಆಸ್ಪತ್ರೆಯಿಂದ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗುತ್ತಿದ್ದು, ಅವರ ಕುಟುಂಬ ಸದಸ್ಯರು, ರಾಜಕೀಯ ಬಂಧುಗಳು ಮತ್ತು ಹಿತೈಷಿಗಳು ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. 

ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ, ಪಿಎಂ, ಸಿಎಂ ಸಹಿತ ಹಲವು ಗಣ್ಯರ ಸಂತಾಪ Rating: 5 Reviewed By: karavali Times
Scroll to Top