‘ಇಂಡಿಯಾ’ ಒಕ್ಕೂಟದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜಗೆ ಬೆಂಬಲ ಘೋಷಿಸಿದ ಸಿಪಿಐಎಂಎಲ್ ಲಿಬರೇಶನ್ ಪಾರ್ಟಿ
ಬಂಟ್ವಾಳ, ಎಪ್ರಿಲ್ 07, 2024 (ಕರಾವಳಿ ಟೈಮ್ಸ್) : ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯು ಸಂವಿಧಾನ ಮತ್ತು ಪ್ಯಾಶಿಸ್ಟ್ ಶಕ್ತಿಗಳ ಮದ್ಯೆ ನಡೆಯುವ ಚುನಾವಣೆಯಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿಯನ್ನು ಸೋಲಿಸಲು ದೇಶದ ಜನತೆ ಒಗ್ಗಟ್ಟಾಗಬೇಕು ಎಂಧು ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜಾರಿಯೋ ಕರೆ ನೀಡಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‍ವಾದಿ, ಲೆನಿನ್ ವಾದಿ) ಲಿಬರೇಶನ್ ವತಿಯಿಂದ ಭಾನುವಾರ ಬಿ ಸಿ ರೋಡಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿಪಿಐಎಂಎಲ್ ಲಿಬರೇಶನ್ ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ‘ಇಂಡಿಯಾ’ ಒಕ್ಕೂಟದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಗೆ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
ಮೋದಿ ಸರಕಾರದ ಆಡಳಿತದಲ್ಲಿ ದೇಶದ ದುಡಿಯುವ ಜನ ಸಂಕಷ್ಟದಲ್ಲಿದ್ದು, ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲದಾಗಿದೆ. ಜನರ ಬದುಕುವ ಹಕ್ಕಿನ ಮೇಲೆ ದಾಳಿಗಳಾಗುತ್ತಿದೆ. ದೇಶದ ಸಂವಿಧಾನದ ಮೇಲೆ ದಾಳಿಗಳಾಗುತ್ತಿದೆ. ಈ ನಿಟ್ಟಿನಲ್ಲಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುವಂತೆ ಕೋರಿದರು.
ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಶಂಕರ್ ಮಾತನಾಡಿ, ಕೇಂದ್ರದ ಬಿ.ಜೆ.ಪಿ ಸರಕಾರವು ಸಂಪೂರ್ಣವಾಗಿ ಭಷ್ಟಾಚಾರದಲ್ಲಿ ಮುಳುಗಿದ್ದು, ಎಲೆಕ್ಷನ್ ಬಾಂಡ್ ಹಗರಣವನ್ನು ಮುಚ್ಚಿ ಹಾಕಲು ಬೇರೆ ಬೇರೆ ಕಾರಣ ನೀಡಿ ವಿರೋಧ ಪಕ್ಷದ ನಾಯಕರನ್ನು, ಮುಖ್ಯಮಂತ್ರಿಗಳನ್ನು ಜೈಲಿಗಟ್ಟಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ ಸಾರ್ವಜನಿಕ ರಂಗದ ಎಲ್ಲಾ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಂಡವಾಳ ಶಾಹಿಗಳಿಗೆ ನೆರವು ನೀಡಲಾಗುತ್ತಿದೆ, ಅವರ ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಲಾಗುತ್ತಿದೆ. ಈ ಭಾರಿಯ ಚುನಾವಣೆ ಈ ದೇಶದ ಜನತೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಈ ದೇಶವನ್ನು ಉಳಿಸಲು ಬಿಜೆಪಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಕೆ ಇ ಮೋಹನ್ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಪ್ರಸ್ತಾವನೆಗೈದರು. ಪಕ್ಷ ಮುಖಂಡ ತುಳಸೀದಾಸ್ ವಿಟ್ಲ ಸ್ವಾಗತಿಸಿದರು. ಇದೇ ವೇಳೆ ಬಿಜೆಪಿಯನ್ನು ಸೋಲಿಸಲು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ನಡೆಸಲು ತೀರ್ಮಾನಿಸಲಾಯಿತು.
0 comments:
Post a Comment