ಬಂಟ್ವಾಳ:, ಎಪ್ರಿಲ್ 11, 2024 (ಕರಾವಳಿ ಟೈಮ್ಸ್) : ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಸಂಸ್ಥೆಯಿಂದ ಕಳೆದ ಎ 8 ರಂದು ಎಳನೀರು ಖರೀದಿಸಿ ಕುಡಿದ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವ ಮಧ್ಯೆಯೇ ಗುರುವಾರ ಬಂಟ್ವಾಳ ಸರಕಾರಿ ಆಸ್ಪತ್ರೆಗೂ ಕೆಲವು ಮಂದಿ ಇದೇ ಕಾರಣಕ್ಕೆ ಅಸ್ವಸ್ಥಗೊಂಡು ದಾಖಲಾಗಿದ್ದಾರೆ.
ಪಾಣೆಮಂಗಳೂರು-ಅಕ್ಕರಂಗಡಿ, ಬಿ ಸಿ ರೋಡು-ಪರ್ಲಿಯಾ, ಮಂಚಿ-ಕುಕ್ಕಾಜೆ ಪರಿಸರದ ಸುಮಾರು 10-12 ಮಂದಿ ಇದೇ ಎಳನೀರು ಸೇವಿಸಿದ ಕಾರಣಕ್ಕೆ ಅಸ್ವಸ್ಥಗೊಂಡಿದ್ದಾರೆ ಎನ್ನಲಾದವರು ಗುರುವಾರ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ಕೆಲವರು ತೀವ್ರ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಬಂಟ್ವಾಳ ಆಸ್ಪತ್ರೆಗೆ ಎಳನೀರು ಕುಡಿದು ಅಸ್ವಸ್ಥಗೊಂಡಿರುವವರು ದಾಖಲಾಗಿರುವ ಬಗ್ಗೆ ಮಾಹಿತಿ ಪಡೆದು ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಸಂಜೆ ಭೇಟಿ ನೀಡಿ ಅಸ್ವಸ್ಥಗೊಂಡವರ ಹೇಳಿಕೆ ಪಡೆದುಕೊಂಡಿದ್ದಾರೆ. ಇಂತಹ ಅಸ್ವಸ್ಥ ಪ್ರಕರಣ ಕಂಡು ಬಂದರೆ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಎಲ್ಲಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿ-ಸಿಬ್ಬಂದಿಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.
ಎಪ್ರಿಲ್ 8 ರ ಸೋಮವಾರದಂದು ಅಡ್ಯಾರ್ ಕಣ್ಣೂರು, ವಳಚ್ಚಿಲ್, ತುಂಬೆ ಪರಿಸರದ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿದ್ದಾರೆ. ಎಳನೀರು ಕುಡಿದ ಬಳಿಕ ಎ 9 ರಂದು ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ-ಭೇಧಿ ಸಮಸ್ಯೆ ಎದುರಿಸಿದ್ದರು. ಬಳಿಕ ಅಸ್ವಸ್ಥಗೊಂಡ ಮಂದಿಗಳು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಸಂದೇಶ ಹರಿದಾಡಿದ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣ ಅಡ್ಯಾರ್ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಶುಚಿಗೊಳಿಸಲಾಗಿದೆ. ಎಳನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದರು. ಈ ಬಗ್ಗೆ ಜನರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿಕೊಂಡಿರುವ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಈ ಸಂದರ್ಭ ಮಂಚಿ ಗ್ರಾ ಪಂ ಅಧ್ಯಕ್ಷ ಜಿ ಎಂ ಇಬ್ರಾಹಿಂ, ಇರಾ ಗ್ರಾ ಪಂ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಮಾಜಿ ಸದಸ್ಯರಾದ ರಿಯಾಝ್ ಹುಸೈನ್ ಬಂಟ್ವಾಳ, ಬಿ ಪ್ರವೀಣ್ ಮೊದಲಾದವರು ಜೊತೆಗಿದ್ದರು.
0 comments:
Post a Comment