ಬಂಟ್ವಾಳ, ಎಪ್ರಿಲ್ 15, 2024 (ಕರಾವಳಿ ಟೈಮ್ಸ್) : ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಓರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.
ಚೂರಿ ಇರಿತರಿಂದ ಗಾಯಗೊಂಡ ವ್ಯಕ್ತಿಯನ್ನು ಬಂಟ್ವಾಳ ನಿವಾಸಿ ಪುಷ್ಪರಾಜ್ ಎಂದು ಹೆಸರಿಸಲಾಗಿದೆ. ಆರೋಪಿಯನ್ನು ರವಿ ನಾವೂರು ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪರಿಚಯಸ್ಥರು ಹಾಗೂ ಸ್ನೇಹಿತರೇ ಎನ್ನಲಾಗಿದ್ದು, ಹಣಕಾಸಿನ ವಿಚಾರದಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಘಟನೆಗೆ ನೈಜ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.
ಈ ಬಗ್ಗೆ ಬಡ್ಡಕಟ್ಟೆ ನಿವಾಸಿ ಗುರುರಾಜ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು,
ಭಾನುವಾರ ರಾತ್ರಿ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದು, ಆರೋಪಿ ರವಿ ನಾವೂರು ಎಂಬಾತ ಪುಷ್ಪರಾಜ್ ಅವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಪುಷ್ಪರಾಜ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯ ಬಗ್ಗೆ ಗಾಯಾಳು ಪುಷ್ಪರಾಜ್ ಬಳಿ ವಿಚಾರಿಸಿದಾಗ ಹಣಕಾಸಿನ ವಿಚಾರದಲ್ಲಿ ಆರೋಪಿ ಹಲ್ಲೆ ನಡೆಸಿರುವುದಾಗಿ ತಿಳಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 72/2024 ಕಲಂ 504, 506, 307 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಲ್ಲೆಗೊಳಗಾದ ಪುಷ್ಪರಾಜ್ ಈ ಹಿಂದೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರಿಂದಾಗಿ ಚೂರಿ ಇರಿತದ ಸುದ್ದಿ ಬಂಟ್ವಾಳದಲ್ಲಿ ಕೆಲ ಕಾಲ ಒಂದು ರೀತಿಯ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಆತಂಕಕ್ಕೆ ತೆರೆ ಎಳೆದಿದ್ದಾರೆ.
0 comments:
Post a Comment