ಬೆಳ್ತಂಗಡಿ, ಮಾರ್ಚ್ 31, 2024 (ಕರಾವಳಿ ಟೈಮ್ಸ್) : ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ಹಿಡಿದ ವೇಣೂರು ಪೊಲೀಸರು ವಾಹನ ಸಹಿತ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಬಜಿರೆ ಗ್ರಾಮದ ಬಾಡಾರು ಎಂಬಲ್ಲಿನ ವೇಣೂರು-ನೈನಾಡು ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಪೊಲೀಸರ ದಾಳಿ ವೇಳೆ ಚಾಲಕ ಸಹಿತ ಇಬ್ಬರು ಪರಾರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿನ ವೇಣೂರು-ನೈನಾಡು ರಸ್ತೆಯಲ್ಲಿ ವೇಣೂರು ಪೆÇಲೀಸ್ ಠಾಣಾ ಪಿಎಸ್ಸೈ ಶ್ರೀಶೈಲ ಡಿ ಮುಗೋಡು ಅವರ ನೇತೃತ್ವದ ಪೊಲೀಸರು ಶನಿವಾರ ಸಂಜೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅದೇ ಮಾರ್ಗವಾಗಿ ಬಂದ ಕೆಎ21 ಬಿ 1902 ನೋಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ಸದ್ರಿ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ವೇಣೂರು ಕಡೆಗೆ ಚಲಾಯಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿಕೊಂಡು ಸುಮಾರು ಅರ್ಧ ಕಿ ಮೀ ದೂರದ ಶಾಂತಿರೊಟ್ಟು ಎಂಬಲ್ಲಿ ವಾಹನವನ್ನು ತಡೆದಿದ್ದಾರೆ. ಈ ಸಂದರ್ಭ ವಾಹನ ನಿಲ್ಲಿಸಿದ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಇಳಿದು ಗೇರು ಗಿಡಗಳ ನಡು ತೋಪಿನಲ್ಲಿ ಓಡಿ ತಪ್ಪಿಸಿಕೊಂಡಿರುತ್ತಾರೆ.
ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ 4 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ವಾಹನವನ್ನು ಸ್ವಾದೀನಪಡಿಸಿಕೊಂಡ ವೇಣೂರು ಪೊಲೀಸರು ಠಾಣಾ ಅಪರಾಧ ಕ್ರಮಾಂಕ 31/2024 ಕಲಂ 5, 7, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ-2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment