ಬಂಟ್ವಾಳ, ಮಾರ್ಚ್ 31, 2024 (ಕರಾವಳಿ ಟೈಮ್ಸ್) : ಹಿಂದುತ್ವಕ್ಕೆ ಬದ್ದನಾಗಿದ್ದುಕೊಂಡು ಅಭಿವೃದ್ದಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಹೇಳಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಬಿ ಸಿ ರೋಡಿನ ಸ್ಪರ್ಶಾ ಕಲಾಮಂದಿರಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಿದ್ದಾಂತದಲ್ಲಿ ಬದ್ದತೆಯಿಂದ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ-ಮುಸ್ಲಿಂ ನಡುವೆ ದಂಗೆ ಆಗುವಂತಹ ಪ್ರಕರಣಗಳನ್ನೂ ಕೂಡಾ ಸುಲಲಿತವಾಗಿ ನಿಭಾಯಿಸುವ ಮೂಲಕ ಜನತೆಗೆ ತೊಂದರೆಯಾಗದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. 370ನೇ ವಿಧಿಯನ್ನು ಸುಲಲಿತವಾಗಿ ನಿಭಾಯಿಸಿ ಕಾಶ್ಮೀರದಲ್ಲೂ ಭಾರತೀಯತೆಯನ್ನು ಹುಟ್ಟು ಹಾಕಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ನಾನು ಕೂಡಾ ಕ್ಷೇತ್ರದಲ್ಲಿ ಅಭಿವೃದ್ದಿಗೆ ಒತ್ತು ನೀಡಿ ಕೆಲಸ ನಿರ್ವಹಿಸುತ್ತೇನೆ ಎಂದರು. ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಹಾಕಿದ ಭದ್ರ ಅಡಿಪಾಯದಲ್ಲಿ ಸುಂದರ ಸೌಧ ಕಟ್ಟುವ ಬಗ್ಗೆ ಜನರ ನಡುವೆ ಹೋಗುವ ಚುನಾವಣೆ ಇದಾಗಿದೆ ಎಂದರಲ್ಲದೆ ಸಂಸದ ನಳಿನ್ ಕುಮಾರ್ ಅವರು ಅಡಿಗಲ್ಲು ಹಾಕಿದ ಅಭಿವೃದ್ದಿ ಕಾರ್ಯಗಳನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಿಲ್ಲದೆ ಆಡಳಿತ ಜಡಗೊಂಡಿದೆ. ಬಿಜೆಪಿ ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳನ್ನೇ ಮತ್ತೆ ಶಿಲಾನ್ಯಾಸ ನೆರವೇರಿಸುವ ಮೂಲಕ ಕಾಂಗ್ರೆಸ್ ನಾಯಕರು ದಿನದೂಡುತ್ತಿದ್ದಾರೆ ಎಂದು ಕಟಕಿಯಾಡಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ವಾರಕ್ಕೊಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಈ ಕ್ಷೇತ್ರದ ಮಾಜಿ ಶಾಸಕ ರಮಾನಾಥ ರೈ ಅವರು ಇದೀಗ ಅವರದ್ದೇ ಸರಕಾರ ಇದೆ. ಯಾವ ಅಭಿವೃದ್ದಿ ಕೆಲಸಗಳು ನಡೀತಿದೆ ಎಂಬ ಬಗ್ಗೆ ಈಗ ಪತ್ರಿಕಾಗೋಷ್ಠಿ ನಡೆಸಲಿ ನೋಡೋಣ ಎಂದು ಸವಾಲು ಹಾಕಿದರು.
ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಬಂಟ್ವಾಳ ಕ್ಷೇತ್ರದ ಕಾರ್ಯಕರ್ತರು ಬಿಜೆಪಿಗೆ ಲೀಡ್ ಕೊಟ್ಟಿದ್ದಾರೆ. ಈ ಬಾರಿಯೂ ಬ್ರಿಜೇಟ್ ಚೌಟರಿಗೆ ಬಂಟ್ವಾಳದಲ್ಲಿ ಅತೀ ಹೆಚ್ಚಿನ ಮತಗಳು ಬರುವ ಮೂಲಕ ಗೆಲುವಿನ ಅಂತರ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಟ್ವಾಳ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ಬಿ ನಾಗರಾಜ ಶೆಟ್ಟಿ, ಮಾಜಿ ಶಾಸಕರುಗಳಾದ ಎ ರುಕ್ಮಯ್ಯ ಪೂಜಾರಿ, ಕೆ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಜಗದೀಶ್ ಶೇಣವ, ನಿತಿನ್ ಕುಮಾರ್, ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಸುಲೋಚನಾ ಜಿ ಕೆ ಭಟ್, ದೇವಪ್ಪ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment