ಪುತ್ತೂರು, ಮಾರ್ಚ್ 21, 2024 (ಕರಾವಳಿ ಟೈಮ್ಸ್) : ತಾಲೂಕಿನ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣ ಬಳಿ ಹಾಗೂ ಕಿಲ್ಲೆ ಮೈದಾನ ಸಮೀಪದ ಟೌನ್ ಹಾಲ್ ಬಳಿ ಗಾಂಜಾ ಸೇವಿಸಿ ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಿಗ್ಗೆ ಪ್ರತ್ಯೇಕವಾಗಿ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸರು ಮೂವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಪುತ್ತೂರು-ಬೈಪಾಸ್ ರಸ್ತೆ ನಿವಾಸಿ ಕಲಂದರ್ ಶಾಹ್ (41), ಬಪ್ಪಳಿಗೆ ನಿವಾಸಿ ಬಿ ಉಮ್ಮರ್ ಫಾರೂಕ್ (36) ಹಾಗೂ ಉಳ್ಳಾಲ-ಮುಕ್ಕಚ್ಚೇರಿ ನಿವಾಸಿ ಕೆ ಮೊಹಿದ್ದೀನ್ (43) ಎಂದು ಗುರುತಿಸಲಾಗಿದೆ.
ಪುತ್ತೂರು ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಜಿ ಜೆ ಹಾಗೂ ಪಿಎಸ್ಸೈ ಸುಬ್ರಹ್ಮಣ್ಯ ಎಚ್ ಅವರ ನೇತೃತ್ವದ ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ ಈ ದಸ್ತಗಿರಿ ಪ್ರಕ್ರಿಯೆ ನಡೆಸಿದ್ದಾರೆ. ಕಲಂದರ್ ಶಾಹ್ ಎಂಬಾತನನ್ನು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಬಂಧಿಸಿದರೆ, ಉಮ್ಮರ್ ಫಾರೂಕ್ ಹಾಗೂ ಮೊಹಿದ್ದೀನ್ ಅವರನ್ನು ಕಿಲ್ಲೆ ಮೈದಾನ ಸಮೀಪದ ಟೌನ್ ಹಾಲ್ ಬಳಿ ದಸ್ತಗಿರಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ದೃಢಪಟ್ಟಿರುವ ಹಿನ್ನಲೆಯಲ್ಲಿ ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment