ರಂಝಾನ್ ವೃತ, ಇಫ್ತಾರ್ ಸಮಯ ಸಮೀಪಿಸುತ್ತಿದ್ದರೂ ಲೆಕ್ಕಿಸದೆ ನದಿಗೆ ಧುಮುಕಿ ಸಹೋದರ ಧರ್ಮೀಯ ಯುವಕನ ಪ್ರಾಣ ರಕ್ಷಣೆಗೆ ಮುಂದಾದ ಮುಸ್ಲಿಂ ಯುವಕರು
ಬಂಟ್ವಾಳ, ಎಪ್ರಿಲ್ 01, 2024 (ಕರಾವಳಿ ಟೈಮ್ಸ್) : ರಂಝಾನ್ ವೃತಾಚರಣೆ ಇದ್ದರೂ ನದಿ ನೀರಿಗೆ ಬಿದ್ದ ಸಹೋದರ ಧರ್ಮೀಯ ಯುವಕನ ಪ್ರಾಣ ರಕ್ಷಣೆಗೆ ಮುಸ್ಲಿಂ ಯುವಕರ ತಂಡವೊಂದು ನದಿಗೆ ಹಾರಿ ಪ್ರಯತ್ನಿಸಿದರೂ ಸಫಲರಾಗದೆ ದುರದೃಷ್ಟವಶಾತ್ ಯುವಕ ಮೃತಪಟ್ಟ ಘಟನೆ ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಮೃತ ಯುವಕನನ್ನು ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಪೈಂಟರ್ ವೃತ್ತಿಯ ಅನೂಶ್ ಎಂದು ಹೆಸರಿಸಲಾಗಿದೆ. ಅನೂಶ್ ತನ್ನ ಸಹೋದರ ಹಾಗೂ ಸ್ನೇಹಿತರ ಜೊತೆಗೂಡಿ ಭಾನುವಾರ ಸಂಜೆ ನೇತ್ರಾವತಿ ನದಿಯಲ್ಲಿ ಈಜಾಡಲು ತೆರಳಿದ್ದು, ಆಕಸ್ಮಾತ್ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಈ ಬಗ್ಗೆ ಮಾಹಿತಿ ಪಡೆದ ಪಾಣೆಮಂಗಳೂರು, ಗೂಡಿನಬಳಿ ಹಾಗೂ ಅಕ್ಕರಂಗಡಿ ಪರಿಸರದ ಜೀವರಕ್ಷಕ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಹನೀಫ್ ಅಕ್ಕರಂಗಡಿ, ಇಂತಿಯಾಝ್ ಅಕ್ಕರಂಗಡಿ, ರಹಿಮಾನ್ ಪಾಣೆಮಂಗಳೂರು, ಅಶ್ಫಾಕ್ ಅಕ್ಕರಂಗಡಿ ಅವರನ್ನೊಳಗೊಂಡ ತಂಡ ರಂಝಾನ್ ಉಪವಾಸ ವೃತಾಚರಣೆಯಲ್ಲಿದ್ದು, ಇಫ್ತಾರ್ ಸಮಯ ಸಮೀಪಿಸುತ್ತಿದ್ದರೂ ಜೀವರಕ್ಷಣೆಗಾಗಿ ನದಿಗೆ ಹಾರಿ ಯುವಕನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಯುವಕರ ಹರಸಾಹಸ ಸಫಲವಾಗದೆ ಯುವಕ ಅನೂಶ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳ ಜೊತೆಗೂಡಿ ಯುವಕನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಜಾತಿ-ಮತಗಳ ಆಧಾರದಲ್ಲೇ ಇಂದು ಪ್ರತೀ ಒಂದು ಸನ್ನಿವೇಶಗಳನ್ನೂ ತೂಗಿ ಅಳೆಯುವ ಇಂದಿನ ಸನ್ನಿವೇಶದಲ್ಲಿ ಪಾಣೆಮಂಗಳೂರಿನ ಜೀವ ರಕ್ಷಕ ತಂಡದ ಯುವಕರ ಸಾಮರಸ್ಯದ ಕಾರ್ಯಕ್ಕೆ ಸ್ಥಳೀಯವಾಗಿ ಜನ ಭೇಷ್ ಅನ್ನುತ್ತಿದ್ದಾರೆ.
0 comments:
Post a Comment