ಕೂಡಿಬೈಲಿನಲ್ಲಿ 13ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ” ಉದ್ಘಾಟನೆ
ಬಂಟ್ವಾಳ, ಮಾರ್ಚ್ 02, 2024 (ಕರಾವಳಿ ಟೈಮ್ಸ್) : ಸಮಾಜದ ಎಲ್ಲ ವರ್ಗದ ಬಡವರ, ಶೋಷಿತರ, ಮರ್ದಿತರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ದೊಡ್ಡ ಮನಸ್ಸಿನ ಪಕ್ಷ ನಿಷ್ಠೆಯ ಹಿರಿಯ ರಾಜಕಾರಣಿ ಬಿ ರಮಾನಾಥ ರೈ ಅವರು ಮುಂದಿನ ಕಂಬಳೋತ್ಸವಕ್ಕೆ ಮುಂಚಿತವಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಭಾಗವಾಗಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಮತ್ತಷ್ಟು ಜನಸೇವೆಗೆ ಅವಕಾಶ ಒದಗಿ ಬರುವಂತಾಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲೆಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾರೈಸಿದರು.
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ, ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷೆಯಲ್ಲಿ ನಡೆಯುತ್ತಿರುವ 13ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ”ದ ಶನಿವಾರ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರ ಇದ್ದರೂ ಇಲ್ಲದಿದ್ದರೂ ದಿನದ ಕೆಲ ಸಮಯ ಕೂಡಾ ಮನೆಯಲ್ಲಿ ಕಳೆಯದೆ ಸದಾ ಜನರ ಕಷ್ಟ-ಸುಖಗಳ ಹಿಂದೆ ಓಡಾಡಿ ಸಂಚಾರ ನಡೆಸುತ್ತಿರುವ ಮಾಜಿ ಸಚಿವ ರಮಾನಾಥ ರೈ ಅವರು ಬೇಡ ಎಂದರೂ ಈ ಜಿಲ್ಲೆಯ ಎಲ್ಲ ಜನರ ಬೇಡಿಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಮನ್ನಿಸಿ ರೈಗಳನ್ನು ಕ್ಯಾಬಿನೆಟ್ ದರ್ಜೆಯ ಮಂತ್ರಿಗಳನ್ನಾಗಿ ಮಾಡಿ ಜಿಲ್ಲೆಯ, ರಾಜ್ಯದ ಜನರ ಆಶೋತ್ತರಗಳ ಈಡೇರಿಸಿ ಜನ ಸೇವೆ ಮಾಡುವ ಅವಕಾಶವನ್ನು ನೀಡಬೇಕು ಎಂದವರು ಆಗ್ರಹಿಸಿದರು.
ಕಂಬಳೋತ್ಸವ ಉದ್ಘಾಟಿಸಿದ ಅಲ್ಲಿಪಾದೆ ಸಂತ ಅಂಥೋನಿ ಧರ್ಮ ಕೇಂದ್ರದ ವಂದನೀಯ ಫೆಡ್ರಿಕ್ ಮೊಂತೆರೋ ಮಾತನಾಡಿ, ಕಂಬಳ ಎಂಬುದು ತುಳುನಾಡಿನ ಮಣ್ಣಿನ ರೈತಾಪಿ ವರ್ಗದ ಜಾನಪದ ಕ್ರೀಡೆಯಾಗಿದ್ದು, ಜಾತಿ-ಧರ್ಮ, ಭಾಷೆ ಎಲ್ಲ ವ್ಯತ್ಯಾಸಗಳನ್ನು ಮೀರಿ ಎಲ್ಲ ವರ್ಗದ ಜನ ಸೇರಿಕೊಂಡು ಆಚರಿಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಅದರಲ್ಲೂ ಮಾಜಿ ಸಚಿವ ರಮಾನಾಥ ರೈ ಅವರ ನೇತತ್ವದಲ್ಲಿ ನಡೆಯುವ ಕಾರ್ಯಕ್ರಮ ಇನ್ನಷ್ಟು ವೈಶಿಷ್ಟ್ಯಗಳಿಂದ ಕೂಡಿ ಜನರ ಮನಸೂರೆಗೊಳ್ಳುವ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಂಬಳ ಎಂಬುದು ಅವಿಭಜಿತ ಕರಾವಳಿ ಜಿಲ್ಲೆಯ ವಿಶೇಷ ಜಾನಪದ ಕ್ರೀಡೆಯಾಗಿದ್ದು, ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುವ ಕ್ರೀಡೆಯಾಗಿ ಜನಪ್ರಿಯಗೊಳ್ಳುತ್ತಿದೆ ಎಂದು ಶ್ಲಾಘಿಸಿದರಲ್ಲದೆ, ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಕಳೆದ ಹತ್ತು ತಿಂಗಳಿನಿಂದ ಉತ್ತಮ ಅಭಿವೃದ್ದಿ ಕಾರ್ಯಕ್ರಮಗಳೊಂದಿಗೆ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪರವಾಗಿ ಮುನ್ನಡೆಯುವುದು ಎಂದರು.
ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಮ್ಮ ಕುಡ್ಲ ವಾಹಿನಿಯ ಮುಖ್ಯಸ್ಥ ಲೀಲಾಕ್ಷ ಕರ್ಕೇರಾ, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಉದ್ಯಮಿ ರಘುನಾಥ ಸೋಮಯಾಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಧಕ ಉಮೇಶ್ ಶೆಟ್ಟಿ ಮಾಣಿ ಸಾಗು, ಕಣಚೂರು ಮೆಡಿಕಲ್ ಕಾಲೇಜು ಅಧ್ಯಕ್ಷ ಹಾಜಿ ಯು ಕೆ ಮೋನು ಕಣಚೂರು, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ನೋಟರಿ-ವಕೀಲ ಅಶ್ವನಿ ಕುಮಾರ ರೈ, ಭರತ್ ಮುಂಡೋಡಿ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮೊದಲಾದವರು ಭಾಗವಹಿಸಿದ್ದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಉಪಾಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಪ್ರಮುಖರಾದ ಉಮೇಶ್ ಕುಲಾಲ್, ಶಬೀರ್ ಸಿದ್ದಕಟ್ಟೆ, ರಾಜೇಶ್ ರೋಡ್ರಿಗಸ್, ಯೂಸುಪ್ ಕರಂದಾಡಿ, ಸಿದ್ದೀಕ್ ಗುಡ್ಡೆಅಂಗಡಿ, ಡೆಂಝಿಲ್ ನಿರೊನ್ಹಾ, ಮುಹಮ್ಮದ್ ನಂದಾವರ, ಸಿದ್ದೀಕ್ ಸರವು, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಂಬಳೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಪ್ರಸ್ತಾವಿಕ ಭಾಷಣಗೈದರು, ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.
0 comments:
Post a Comment