ಬಂಟ್ವಾಳ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಗೌಡ ಸಾರಸ್ವತ ಬ್ರಾಹ್ಮಣ ವೃಂದದವರ ಶ್ರೀ ತಿರುಮಲ ವಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವ ಹಾಗೂ ಬ್ರಹ್ಮರಥದ 200ನೇ ವರ್ಷಾಚರಣೆ ಕಾರ್ಯಕ್ರಮವು ಮಾರ್ಚ್ 12 ರಿಂದ 17ರವರೆಗೆ ದೇವಳ ವಠಾರದಲ್ಲಿ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಹೇಳಿದರು.
ಬುಧವಾರ ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥೋತ್ಸವಕ್ಕೆ ಪೂರ್ವಭಾವಿಯಾಗಿ ಮಾರ್ಚ್ 10 ರಂದು ಬೆಳಿಗ್ಗೆ 10 ಗಂಟೆಗೆ ಸಮಾಜ ಬಾಂಧವರಿಂದ ಮಲ್ಲಿಗೆ ಹೂವಿನಿಂದ ಸಹಸ್ರನಾಮ ಪುಷ್ಪಾರ್ಚನೆ ಹಾಗೂ ಬೆಳಿಗ್ಗೆ 11 ಗಂಟೆಗೆ ಶ್ರೀ ಕಾಶೀ ಮಠಾಧೀಶ ಶ್ರೀ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬಂಟ್ವಾಳ ಮೊಕ್ಕಾಂಗೆ ಆಗಮಿಸುವರು. ಸಂಜೆ 5 ಗಂಟೆಗೆ ಬಡ್ಡಕಟ್ಟೆ ಶ್ರೀ ಹನುಂತ ದೇವಸ್ಥಾನ ಬಳಿಯಿಂದ ವಿಶೇಷ ಹೊರೆ ಕಾಣಿಕೆ ಮೆರವಣಿಗೆ ಹೊರಡಲಿದೆ ಎಂದ ಅವರು, ಮಾರ್ಚ್ 11 ರಂದು ಚಕ್ರಾಬ್ಜ ಮಂಡಲ ಪೂಜೆ, ಸಮಾಜ ಬಾಂಧವರಿಂದ ಲಕ್ಷ ತುಳಸಿ ಅರ್ಚನೆ, ಮಹಿಳೆಯರಿಂದ ಲಕ್ಷ ಪುಷ್ಪಾರ್ಚನೆ, ಬಂಟ್ವಾಳ ಶ್ರೀ ಕಾಶೀ ಮಠದ ವೃಂದಾವನದಲ್ಲಿ ಶ್ರೀ ಹನುಮಂತ ದೇವರಿಗೆ ಗಂಧ ಲೇಪನ ಸೇವೆ ನಡೆಯಲಿದೆ ಎಂದರು.
ಮಾರ್ಚ್ 12 ರಂದು ಗರುಡೋತ್ಸವ ಕಾರ್ಯಕ್ರಮದ ಮೂಲಕ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಮಾರ್ಚ್ 13 ರಂದು ಹನುಮಂತೋತ್ಸವ, 14 ರಂದು ಚಂದ್ರಮಂಡಲೋತ್ಸವ, 15 ರಂದು ಸಣ್ಣ ರಥೋತ್ಸವ, 16 ರಂದು ಬ್ರಹ್ಮರಥೋತ್ಸವ ಹಾಗೂ ಮಾರ್ಚ್ 17 ರಂದು ಅವಭೃತೋತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳೂ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಜ್ಞಾನುಸಾರವೇ ನಡೆಯಲಿದ್ದು, ಶ್ರೀಗಳು ಮಾ 10 ರಂದು ಆಗಮಿಸಿ 17ರವೆಗೆ ಬಂಟ್ವಾಳದಲ್ಲಿ ಉಪಸ್ಥಿತರಿರಲಿದ್ದಾರೆ ಎಂದ ಅವರು ಚಿನ್ನದ ಪೇಟೆ ಖ್ಯಾತಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಸುಮಾರು 5 ದಶಕಗಳ ಪುರಾತನ ಇತಿಹಾಸವುಳ್ಳದ್ದಾಗಿದ್ದು, ಜೀವನದಿ ನೇತ್ರಾವತಿ ತಟದಲ್ಲಿ ವಿರಾಜಮಾನವಾಗಿದೆ. ಕಳೆದ 200 ವರ್ಷಗಳಿಂದಲೂ ಇಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದ್ದು, ಈ ಬಾರಿ 200ನೇ ವಾರ್ಷಿಕ ರಥೋತ್ಸವ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಕ್ತೇಸರರಾದ ಭಾಮಿ ನಾಗೇಂದ್ರನಾಥ ಶೆಣೈ, ಬಿ ಸುರೇಶ್ ವಿ ಬಾಳಿಗಾ, ವಸಂತ ಪ್ರಭು ಶಿವಾನಂದ ಬಾಳಿಗಾ, ಬಸ್ತಿ ಮಾಧವ ಶೆಣೈ ಉಪಸ್ಥಿತರಿದ್ದರು.
0 comments:
Post a Comment