ಬಂಟ್ವಾಳ, ಮಾರ್ಚ್ 17, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಂಟ್ವಾಳದಲ್ಲಿ ಇದುವರೆಗೂ ನೋಂದಾಯಿಸಿಕೊಂಡಿರುವ ಮತದಾರರ ಒಟ್ಟು ಸಂಖ್ಯೆ 2,27,995 ಮಂದಿ, ಈ ಪೈಕಿ 1,12,159 ಮಂದಿ ಪುರುಷ ಮತದಾರರು ಹಾಗೂ 1,15,836 ಮಂದಿ ಮಹಿಳಾ ಮತದಾರರಿದ್ದಾರೆ. ಒಟ್ಟು 4,672 ಮಂದಿ ಯುವ ಮತದಾರರಿದ್ದು, 2426 ಮಂದಿ ಪುರುಷರು ಹಾಗೂ 2246 ಮಂದಿ ಮಹಿಳಾ ಯುವ ಮತದಾರರಿದ್ದಾರೆ ಎಂದು ಬಂಟ್ವಾಳ ತಾಲೂಕು ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ನಗರ ಯೋಜನಾ ನಿರ್ದೇಶಕ ಡಾ ಉದಯ ಶೆಟ್ಟಿ ತಿಳಿಸಿದ್ದಾರೆ.
ಭಾನುವಾರ ಸಂಜೆ ತಾಲೂಕಾಡಳಿತ ಸಬಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ 1774 ಮಂದಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ 2832 ಮಂದಿ ಭಿನ್ನಚೇತನ ಮತದಾರರಿದ್ದಾರೆ. ಇವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಅಂಚೆ ಮತದಾರರ ಸಂಖ್ಯೆ 4606 ಇದೆ ಎಂದರು.
ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು, ತಿದ್ದುಪಡಿ ಮಾಡಲು ವಿಳಾಸ ಬದಲಾಯಿಸಲು ಇನ್ನೂ ಅವಕಾಶ ಇದ್ದು, ಮಾರ್ಚ್ 24ರವರೆಗೆ ಈ ಅವಕಾಶವನ್ನು ಮತದಾರರು ಉಪಯೋಗಿಸಿಕೊಳ್ಳಬಹುದು ಎಂದ ಚುನಾವಣಾಧಿಕಾರಿ ಎಪ್ರಿಲ್ 4 ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಎಪ್ರಿಲ್ 5 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎಪ್ರಿಲ್ 8 ನಾಮಪತ್ರ ವಾಪಾಸು ಪಡೆಯಲು ಕೊನೆ ದಿನಾಂಕವಾಗಿದೆ. ಎಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 6 ರಂದು ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗಾಗಿ ಇಡೀ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ಸಂಖ್ಯೆ 1950 ಹಾಗೂ ಬಂಟ್ವಾಳ ತಾಲೂಕು ಕಂಟ್ರೋಲ್ ರೂಂ ಸಂಖ್ಯೆ 08255-23500 ಆಗಿದೆ ಎಂದು ಎ ಆರ್ ಒ ಡಾ ಉದಯ ಶೆಟ್ಟಿ ತಿಳಿಸಿದರು.
0 comments:
Post a Comment