ಕಾಂಗ್ರೆಸ್ 3ನೇ ಪಟ್ಟಿಯಲ್ಲಿ ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಪ್ರಭಾವಿ ಸಚಿವರುಗಳ ಸಂಬಂಧಿಕರಿಗೆ ಅವಕಾಶ, 6 ಮಂದಿ ಮಹಿಳಾಮಣಿಗಳಿಗೆ ಟಿಕೆಟ್
ಬೆಂಗಳೂರು, ಮಾರ್ಚ್ 21, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ್ದು,, ಕರ್ನಾಟಕದ 2ನೇ ಪಟ್ಟಿಯಲ್ಲಿ 17 ಕ್ಷೇತ್ರಗಳಿಗೆ ಉಮೇದುವಾರರನ್ನು ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಬಿಲ್ಲವ ಅಭ್ಯರ್ಥಿಗೆ ಮಣೆ ಹಾಕಲಾಗಿದ್ದು, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಶಿಷ್ಯ ಎಂದೇ ಬಿಂಬಿಸಲ್ಪಟ್ಟಿರುವ ಪದ್ಮರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷಾಂತರಿ ಜಯಪ್ರಕಾಶ್ ಹೆಗ್ಡೆಗೆ ಮತ್ತೆ ಅವಕಾಶ ನೀಡಲಾಗಿದೆ.
ಈ ಬಾರಿ ಪ್ರಭಾವಿ ಸಚಿವರ ಸಂಬಂಧಿಕರಿಗೆ ಬಹುತೇಕ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಪ್ರಮುಖವಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ರವೀಂದ್ರ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಘೋಷಿಸಲಾಗಿದೆ.
ಈಶ್ವರ್ ಖಂಡ್ರೆ ಅವರ ಪುತ್ರ 26 ವರ್ಷದ ಸಾಗರ್ ಖಂಡ್ರೆಗೆ ಬೀದರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು, ಈ ಮೂಲಕ ಲೋಕಸಭಾ ಚುನಾವಣಾ ಕಣದಲ್ಲಿರುವ ಅತ್ಯಂತ ಕಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯ ಯದುವೀರ್ ಒಡೆಯರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ ಲಕ್ಷ್ಮಣ್ ಸ್ಪರ್ಧಿಸಲಿದ್ದಾರೆ. ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಘೋಷಣೆಯಾಗಿಲ್ಲ. ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು.
ಕರ್ನಾಟಕದ ಎರಡೂ ಪಟ್ಟಿಯಲ್ಲಿ ಒಟ್ಟು 6 ಮಂದಿ ಮಹಿಳಾಮಣಿಗಳು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಹೆಸರು ಘೋಷಣೆಯಾಗಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಸೌಮ್ಯಾ ರೆಡ್ಡಿ, ಪ್ರಭಾ ಮಲ್ಲಿಕಾರ್ಜುನ, ಅಂಜಲಿ ಲಿಂಬಾಳ್ಕರ್, ಸಂಯುಕ್ತಾ ಪಾಟೀಲ್ ಹಾಗೂ ಪ್ರಿಯಾಂಕ ಜಾರಕಿಹೊಳಿಗೆ ಟಿಕೆಟ್ ಘೋಷಣೆಯಾಗಿದೆ.
ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ : ಬೆಂಗಳೂರು ದಕ್ಷಿಣ ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ರೆಡ್ಡಿ ಸಮುದಾಯದ ಸೌಮ್ಯಾ ರೆಡ್ಡಿ, ಬೆಂಗಳೂರು ಉತ್ತರ ಸಾಮಾನ್ಯ ಲೋಕಸಭಾ ಕ್ಷೇತಕ್ಕೆ ಒಕ್ಕಲಿಗ ಸಮುದಾಯದ ಪ್ರೊ ಎಂ.ವಿ. ರಾಜೀವ್ ಗೌಡ, ಬಾಗಲಕೋಟೆ ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ವೀರಶೈವ ಲಿಂಗಾಯತ ವರ್ಗದ ಸಂಯುಕ್ತಾ ಪಾಟೀಲ್, ಮೈಸೂರು-ಕೊಡಗು ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ಒಕ್ಕಲಿಗ ಸಮುದಾಯಕ್ಕೆ ಸೇರಿದ, ಎಐಸಿಸಿ ವಕ್ತಾರ ಎಂ. ಲಕ್ಷ್ಮಣ್, ಕಲಬುರಗಿ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಡಾ ರಾಧಾಕೃಷ್ಣ ದೊಡ್ಡಮನಿ, ದಾವಣಗೆರೆ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ವರ್ಗದ ಪ್ರಭಾವತಿ ಮಲ್ಲಿಕಾರ್ಜುನ, ಬೆಂಗಳೂರು ಸೆಂಟ್ರಲ್ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮನ್ಸೂರ್ ಅಲಿಖಾನ್, ಉತ್ತರ ಕನ್ನಡ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಮರಾಠ ಸಮುದಾಯದ ಡಾ. ಅಂಜಲಿ ನಿಂಬಾಳ್ಕರ್, ಧಾರವಾಡ ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ಕುರುಬ ಸಮುದಾಯದ ವಿನೋದ್ ಅಸೋಟಿ, ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಬಿ.ಎನ್. ಚಂದ್ರಪ್ಪ, ದಕ್ಷಿಣ ಕನ್ನಡ ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ಬಿಲ್ಲವ ಸಮುದಾಯದ ನ್ಯಾಯವಾದಿ ಪದ್ಮರಾಜ್, ಉಡುಪಿ-ಚಿಕ್ಕಮಗಳೂರು ಸಾಮಾನ್ಯ ಲೋಕಸಭಾ ಕ್ಷೇತ್ರಕ್ಕೆ ಬಂಟ ಸಮುದಾಯಕ್ಕೆ ಸೇರಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೊಪ್ಪಳ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ರಾಜಶೇಖರ್ ಹಿಟ್ನಾಳ್, ಬೀದರ್ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ವರ್ಗದ ಸಾಗರ್ ಖಂಡ್ರೆ, ರಾಯಚೂರು ಪರಿಶಿಷ್ಟ ಪಂಗಡ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪರಿóಶಿಷ್ಟ ಪಂಗಡದ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ಜಿ ನಾಯಕ್, ಬೆಳಗಾವಿ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ವರ್ಗದ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿ ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ.
0 comments:
Post a Comment