ಬಡಜನರಿಗೆ ಯೋಜನೆ ಕೊಟ್ಟರೆ ಸರಕಾರ ದಿವಾಳಿಯಾಗೋದಿಲ್ಲ, ಶ್ರೀಮಂತರಿಗೆ ಸಾಲ ನೀಡಿ ಮರುಪಾವತಿ ಆಗದಿದ್ದರೆ ಮಾತ್ರ ದಿವಾಳಿ ಆಗುತ್ತೆ : ಡಾ ಮಂಜುನಾಥ ಭಂಡಾರಿ - Karavali Times ಬಡಜನರಿಗೆ ಯೋಜನೆ ಕೊಟ್ಟರೆ ಸರಕಾರ ದಿವಾಳಿಯಾಗೋದಿಲ್ಲ, ಶ್ರೀಮಂತರಿಗೆ ಸಾಲ ನೀಡಿ ಮರುಪಾವತಿ ಆಗದಿದ್ದರೆ ಮಾತ್ರ ದಿವಾಳಿ ಆಗುತ್ತೆ : ಡಾ ಮಂಜುನಾಥ ಭಂಡಾರಿ - Karavali Times

728x90

9 March 2024

ಬಡಜನರಿಗೆ ಯೋಜನೆ ಕೊಟ್ಟರೆ ಸರಕಾರ ದಿವಾಳಿಯಾಗೋದಿಲ್ಲ, ಶ್ರೀಮಂತರಿಗೆ ಸಾಲ ನೀಡಿ ಮರುಪಾವತಿ ಆಗದಿದ್ದರೆ ಮಾತ್ರ ದಿವಾಳಿ ಆಗುತ್ತೆ : ಡಾ ಮಂಜುನಾಥ ಭಂಡಾರಿ

ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ 


ಬಂಟ್ವಾಳ, ಮಾರ್ಚ್ 09, 2024 (ಕರಾವಳಿ ಟೈಮ್ಸ್) : ಬಡವರಿಗೆ ಯೋಜನೆಗಳನ್ನು ಕೊಟ್ಟು ಆರ್ಥಿಕವಾಗಿ ಸಬಲವಾಗಿಸಿದೆ ಯಾವತ್ತೂ ಸರಕಾರ ದಿವಾಳಿಯಾಗುವುದಿಲ್ಲ. ಹೊರತು ಬಲಿಷ್ಠ ಉದ್ಯಮಿಗಳಿಗೆ ಸಾಲ ನೀಡಿ ಅವರು ಸಾಲ ಮರುಪಾವತಿ ಮಾಡದಿದ್ದರೆ ಮಾತ್ರ ಸರಕಾರ ದಿವಾಳಿಯಾಗುತ್ತದೆ. ಬಡವರ ಆರ್ಥಿಕತೆ ಸುಭದ್ರವಾದಾಗ ಆರ್ಥಿಕತೆ ರೊಟೇಶನ್ ಮೂಲಕ ಸರಕಾರದ ಬೊಕ್ಕಸ ಮತ್ತಷ್ಟು ಸದೃಢವಾಗಲಿದೆ ಎಂದು ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಹೇಳಿದರು.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಸಾರ್ವಜನಿಕರು ಹಾಗೂ ಗ್ರಾಮೀಣ, ನಗರ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಗ್ಯಾರಂಟಿ ಸಮಾವೇಶ ಆಯೋಜಿಸುವಂತೆ ಸರಕಾರ ಹೊರಡಿಸಿರುವ ನಿರ್ದೇಶನದಂತೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ತಾಲೂಕು ಆಡಳಿತದ ವತಿಯಿಂದ ಬಿ ಸಿ ರೋಡಿನಲ್ಲಿ ಶನಿವಾರ ಅಪರಾಹ್ನ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಇಂದಿಗೂ ಜಿ ಎಸ್ ಟಿ ಕಟ್ಟುವುದರಲ್ಲಿ 2ನೇ ಸ್ಥಾನದಲ್ಲಿದೆ. ಜಿ ಎಸ್ ಟಿ ಕಟ್ಟುವುದರಲ್ಲಿ  ಉತ್ತಮ ಸ್ಥಿತಿಯಲ್ಲಿರಬೇಕಾದರೆ ಆರ್ಥಿಕ ಚಟುವಟಕೆಯಲ್ಲೂ ಉತ್ತಮ ಸ್ಥಿತಿಯಲ್ಲಿರಬೇಕು ಎಂಬ ಕನಿಷ್ಠ ಜ್ಞಾನವಾದರೂ ಸರಕಾರ ದಿವಾಳಿಯಾಗಿದೆ ಎಂದು ಹೇಳುವವರಲ್ಲಿರಬೇಕು ಎಂದು ಸವಾಲೆಸೆದರು. 

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಆರಂಭದಲ್ಲಿ ಅಪಪ್ರಚಾರ ನಡೆಸಿದ ಬಿಜೆಪಿಗರು ಅವುಗಳ ಅನುಷ್ಠಾನದ ಬಳಿಕ ಬೊಕ್ಕಸ ದಿವಾಳಿಯಾಗಲಿದೆ ಎಂಬ ಅಪಪ್ರಚಾರ ನಡೆಸಿದರು. ಆರ್ಥಿಕ ಸ್ಥಿತಿಯೂ ಉತ್ತಮವಾದುದನ್ನು ತಿಳಿದ ಬಳಿಕ ಅಭಿವೃದ್ದಿ ಕಾರ್ಯ ಕುಂಠಿಗೊಂಡಿದೆ ಎಂಬ ಅಪಪ್ರಚಾರ ನಡೆಸಿದರು. ಅದರಲ್ಲೂ ವಿಫಲರಾದ ಬಳಿಕ ಇದೀಗ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸರಕಾರ ಚುನಾವಣೆ ಅಥವಾ ವೋಟಿನ ದೃಷ್ಟಿಯಿಂದ ಈ ಬಡವರ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಬದಲಾಗಿ ಬಡ ಜನರ ಆರ್ಥಿಕ ಹಾಗೂ ಬದುಕಿನ ದೃಷ್ಟಿಯಿಂದ ಜಾರಿಗೆ ತರಲಾಗಿದೆ. ಈ ಹಿನ್ನಲೆಯಲ್ಲಿ ಸರಕಾರ ಈಗಾಗಲೇ ಮುಂದಿನ ನಾಲ್ಕು ವರ್ಷಗಳಿಗೆ ಬೇಕಾಗುವಷ್ಟು ಅನುದಾನವನ್ನು ಮೀಸಲಿರಿಸಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತ ಪೂರ್ತಿ ಈ ಎಲ್ಲಾ ಯೋಜನೆಗಳನ್ನೂ ಮುಂದುವರಿಸಲಿದೆ ಎಂದು ಡಾ ಭಂಡಾರಿ ಭರವಸೆ ನೀಡಿದರು. 

ಎಂಎಲ್ಸಿ ಬಿ ಕೆ ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಜನರಿಗೆ ನೀಡಿದ ಭರವಸೆಯಂತೆ ಜನಾಶೀರ್ವಾದ ದೊರೆತು ತಿಂಗಳುಗಳ ಅಂತರದಲ್ಲಿ ನೀಡಿದ ಎಲ್ಲ ಗ್ಯಾರಂಟಿಗಳನ್ನೂ ಪ್ರಾಮಾಣಿಕವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ. ಬಿಜೆಪಿಗರು ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಇವರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಬೊಕ್ಕಸ ಅಂದರೆ ಯಾರದು? ಅದನ್ನು ತುಂಬಿದವರು ಯಾರು? ನಾಡಿನ ಜನ ಬೆವರು ಸುರಿಸಿ ದುಡಿಯದಿದ್ದರೆ ಈ ರಾಜ್ಯದ ಅಥವಾ ದೇಶದ ಬೊಕ್ಕಸ ತುಂಬುವುದಾದರೂ ಎಲ್ಲಿಂದ? ಜನ ತುಂಬಿದ ಬೊಕ್ಕಸವನ್ನು ಮರಳಿ ಜನತೆಗೆ ಹಂಚಿದ್ದೇವೆ ಹೊರತು ಎಲ್ಲಿಗೂ ದೋಚಿಲ್ಲ ಎಂದರು. 

ತಿನ್ನುವ ಅನ್ನಕ್ಕಾಗಿ ಈ ದೇಶದಲ್ಲಿ ಕಾಯಿದೆ ಮಾಡಿ ಜನರ ಹೊಟ್ಟೆ ತುಂಬಿಸುವ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡ ಖ್ಯಾತಿ ಅದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಇದೆ ಎಂದ ಅವರು ಕಾಂಗ್ರೆಸ್ ಸರಕಾರ ಅನುಷ್ಥಾನಕ್ಕೆ ತಂದಿರುವ ಎಲ್ಲ ಗ್ಯಾರಂಟಿ ಯೋಜನೆಗಳೂ ಕೂಡಾ ಬಡವರ ಮನೆ-ಹೊಟ್ಟೆಯನ್ನು ತುಂಬಿದೆ ಎಂಬ ಸಂತೋಷ ನಮಗೆಲ್ಲರಿಗೂ ಇದೆ ಎಂದರು. 

ಎಂಎಲ್ಸಿ ಹರೀಶ್ ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ಸರಕಾರ ಜನರ ಬದುಕು ಕಟ್ಟಿಕೊಟ್ಟಿದೆ. ಕೇವಲ ಭಾವನೆಗಳ ಮೂಲಕ ಬದುಕಿದರೆ ಬದುಕು ಸುಗಮವಾಗುವುದಿಲ್ಲ. ಬದುಕು ಕಟ್ಟಿಕೊಳ್ಳುವುದು ಪ್ರಮುಖವಾಗಿದೆ. ಇದಕ್ಕಾಗಿ ರಾಜ್ಯದ ಸರಕಾರ ಜನರ ಬದುಕಿಗೆ ಬೇಕಾಗುವ ಅವಶ್ಯಕತೆಗಳನ್ನು ಗ್ಯಾರಂಟಿ ಯೋಜನೆಗಳ ಮೂಲಕ ಪೂರೈಸಿದೆ ಎಂದರದಲ್ಲದೆ ನುಡಿದಂತೆ ಜನನಾಯಕ ಹಾಗೂ ಸರಕಾರ ಎಂಬುದನ್ನು ಸಿದ್ದರಾಮಯ್ಯ ಮತ್ತೆ ಸಾಬೀತು ಮಾಡಿದ್ದಾರೆ ಎಂದರು.

ಜಿ ಪಂ ಸಿಇಒ ಆನಂದ, ಮಂಗಳೂರು ಕಮಿಷನರ್ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ಉಸ್ಮಾನ್, ಮಾಜಿ ಸಚಿವ ಬಿ ರಮಾನಾಥ ರೈ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. 

ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮುಮ್ತಾಝ್, ಮೆಸ್ಕಾಂ ಇಲಾಖಾಧಿಕಾರಿ ನಾರಾಯಣ ಭಟ್, ಕೆ ಎಸ್ ಆರ್ ಟಿ ಸಿ ಡೀಸಿ ಜಯಕರ್ ಶೆಟ್ಟಿ, ಕೌಶಲ್ಯಾಭಿವೃದ್ದಿ ಯೋಜನೆ ಇಲಾಖಾಧಿಕಾರಿ ಪ್ರದೀಪ್ ಡಿ ಸೋಜ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರು ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. 

ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಸ್ವಾಗತಿಸಿ, ತೋಟಗಾರಿ ಇಲಾಖಾಧಿಕಾರಿ ಪ್ರದೀಪ್ ಡಿ’ಸೋಜ ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ಫಲಾನುಭವಿಗಳಾದ ಶಬನಾ ಕಾವಳಕಟ್ಟೆ, ಸರೋಜಿನಿ ಸರಪಾಡಿ, ಅನಿತಾ ಡೇಸಾ, ಗಿರೀಶ್ ಪೆರ್ವ, ಹುಸೈನ್ ಬೋಳಂತೂರು, ವೀಣಾ ಕೊಳ್ನಾಡು ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಗ್ಯಾರಂಟಿ ಫಲಾನುಭವಿಗಳು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಡಜನರಿಗೆ ಯೋಜನೆ ಕೊಟ್ಟರೆ ಸರಕಾರ ದಿವಾಳಿಯಾಗೋದಿಲ್ಲ, ಶ್ರೀಮಂತರಿಗೆ ಸಾಲ ನೀಡಿ ಮರುಪಾವತಿ ಆಗದಿದ್ದರೆ ಮಾತ್ರ ದಿವಾಳಿ ಆಗುತ್ತೆ : ಡಾ ಮಂಜುನಾಥ ಭಂಡಾರಿ Rating: 5 Reviewed By: karavali Times
Scroll to Top