ಬಂಟ್ವಾಳ, ಮಾರ್ಚ್ 13, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಸಚಿವರಾಗಿದ್ದ ಬಹುಮುತುವರ್ಜಿ ವಹಿಸಿ ಜಾರಿಗೆ ತಂದಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಪುದು ಗ್ರಾಮದಲ್ಲಿ ಮಾತ್ರ ಬಾವಿ ಸಹಿತ ನೀರಿನ ಮೂಲಗಳಿಂದ ಬರುವ ನೀರು ಕಲುಷಿತ ಹಾಗೂ ಕೆಸರು ಮಿಶ್ರಿತವಾಗಿರುವುದರಿಂದ ಇಲ್ಲಿನ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಹಾಹಾಕಾರಪಡುವಂತಾಗಿದೆ. ಇಲ್ಲಿನ ಜನ ಕಳೆದ ಕೆಲ ದಿನಗಳಿಂದ ಕುಡಿಯುವ ಉದ್ದೇಶಕ್ಕಾಗಿ ಮಾರುಕಟ್ಟೆಯ ಬಾಟಲಿ ನೀರನ್ನು ಅವಲಂಬಿಸುವಂತಾಗಿದೆ.
ಪುದು ಗ್ರಾಮದಲ್ಲಿ ನದಿಗೆ ಸಮೀಪವಾಗಿ ಬಾವಿಯಿಂದ ನೀರು ಟ್ಯಾಂಕಿಗೆ ಪೂರೈಕೆಯಾಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ಬಾವಿಯಲ್ಲಿ ಮಣ್ಣು ಮಿಶ್ರಿತ ಕೆಂಪು ಬಣ್ಣದ ನೀರು ಸರಬರಾಜಾಗುತ್ತಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಸದ್ರಿ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ನೀರು ಮಲಿನವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದೃಢಪಡಿಸಿ ವರದಿ ನೀಡಿದೆ.
ಅಲ್ಲದೆ ಹತ್ತಿರದಲ್ಲಿರುವ ಕೊಳವೆ ಬಾವಿಯ ಪಂಪ್ ಹಾಳಾಗಿದ್ದು ಇದರಿಂದಲೂ ನೀರು ಬರುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ಕುಡಿಯುವ ನೀರಿಗಾಗಿ ಮಾರುಕಟ್ಟೆಯಿಂದ ಹಣ ಕೊಟ್ಟು ತರುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತ್ ವತಿಯಿಂದ ಹೊಸದಾಗಿ ಕೊಳವೆ ಬಾವಿ ನಿರ್ಮಿಸಿದರೂ ಅದರಲ್ಲಿ ನೀರು ಸಿಕ್ಕಿಲ್ಲ. ಹೀಗಾಗಿ ಪುದು ಗ್ರಾಮದ ಸುಜೀರು, ದತ್ತನಗರ, ಮಲ್ಲಿ, ದೈಯಡ್ಕದ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸಬೇಕಾದ ಪಂಚಾಯತ್ ಆಡಳಿತ ಸುಡು ಬೇಸಗೆಯಾದರೂ ಇನ್ನೂ ಕೈ ಕಟ್ಟಿ ಕುಳಿತಿದೆ ಎಂಬ ಆಕ್ರೋಶ ಜನರಿಂದ ಕೇಳಿ ಬರುತ್ತಿದೆ.
ಅದೇ ರೀತಿ ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿಯೂ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಆತಂಕಪಡುವಂತಾಗಿದೆ. ಅಂತರ್ಜಲ ಮಟ್ಟ ಕಡಿಮೆಯಾಗಿದ್ದು ಮನೆಗಳಲ್ಲಿ ಬಾವಿಯ ನೀರು ಆವಿಯಾಗಿದೆ. ಸಂಪೂರ್ಣವಾಗಿ ಪಂಚಾಯತ್ ನೀರಿನ ವ್ಯವಸ್ಥೆಗೆ ಅವಲಂಬಿತರಾಗಿದ್ದು ಗ್ರಾಮದ ಕೊಳವೆ ಬಾವಿ ಕೂಡ ಬತ್ತಿ ಹೋಗಿದೆ. ಹೊಸ ಕೊಳವೆ ಬಾವಿಗಾಗಿ ಸ್ಥಳ ಪರಿಶೀಲಿಸಿದ್ದರೂ ಅಲ್ಲಿಗೆ ಕೊಳವೆ ಬಾವಿಯ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಕಷ್ಟ ಎದುರಾಗಿದೆ. ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ.
ಬಂಟ್ವಾಳದ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಯನ್ನೇ ಆಶ್ರಯಿಸಿದ್ದು, ಈ ಬಾರಿ ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ತುಂಬೆ ಅಣೆಕಟ್ಟಿನಲ್ಲಿ ಸದ್ಯ 6 ಮೀ ನೀರು ಸಂಗ್ರಹವಿದೆ. ಶಂಭೂರು ಡ್ಯಾಮಿನಲ್ಲೂ ಸಮುದ್ರ ಮಟ್ಟದಿಂದ 18.9 ಮೀ ನೀರಿನ ಸಂಗ್ರಹವಿದೆ. ಬಂಟ್ವಾಳ ಜಕ್ರಿಬೆಟ್ಟು ಬಳಿ ನೂತನ ಡ್ಯಾಂ ನಿರ್ಮಾಣದಿಂದ ಈ ಭಾಗದಲ್ಲಿಯೂ ನದಿ ನೀರು ಶೇಖರಣೆ ಸಾಕಷ್ಟು ಪ್ರಮಾಣದಲ್ಲಿದೆ. ಇದರಿಂದಾಗಿ ಈ ಭಾಗದ ಸುತ್ತಲಿನ ಪರಿಸರದ ಎಲ್ಲಾ ಬಾವಿ, ಕೆರೆಗಳಲ್ಲಿ ಒಳಹರಿವು ಜಾಸ್ತಿಯಾಗಿದ್ದು ಬಂಟ್ವಾಳ ಕಸ್ಬಾ, ನಾವೂರು ಗ್ರಾಮ, ಕಾವಳಮೂಡೂರು ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿಲ್ಲ.
0 comments:
Post a Comment