ಮಂಗಳೂರು, ಮಾರ್ಚ್ 19, 2024 (ಕರಾವಳಿ ಟೈಮ್ಸ್) : ವಿವಾಹ ವಿಚ್ಛೇದಿತ ಮಹಿಳೆಗೆ ಮ್ಯಾಟ್ರಿಮೋನಿಯೊಂದರಲ್ಲಿ ಪರಿಚಯವಾದ ವ್ಯಕ್ತಿ ವಿವಾಹ ನಿರಾಕರಣೆ ಮಾಡಿದ ಕಾರಣಕ್ಕೆ ಜೀವಬೆದರಿಕೆ ಒಡ್ಡಿದ್ದಲ್ಲದೆ ಮಹಿಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಗ್ಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವ್ಯಕ್ತಿಯನ್ನು ಪ್ರಶಾಂತ್ ಕೋಟ್ಯಾನ್ ಉಡುಪಿ ಎಂದು ಹೆಸರಿಸಲಾಗಿದೆ. 7 ವರ್ಷಗಳ ಹಿಂದೆ ಮದುವೆಯಾಗಿ ಬಳಿಕ ವಿವಾಹ ವಿಚ್ಛೇದನವಾಗಿರುವ ಸಂತ್ರಸ್ತ ಮಹಿಳೆ ತನ್ನ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸವಾಗಿರುತ್ತಾರೆ. ಸದ್ರಿ ಮಹಿಳೆಗೆ 2022 ರಲ್ಲಿ ಮೇಟ್ರಿಮೋನಿಯೊಂದರ ಮೂಲಕ ಆರೋಪಿ ಪ್ರಶಾಂತ್ ಕೋಟ್ಯಾನ್ ಉಡುಪಿ ಎಂಬಾತನ ಪರಿಚಯವಾಗಿ ಮದುವೆಯಾಗಲು ತೀರ್ಮಾನಿಸಲಾಗಿತ್ತು. ಆದರೆ ಆರೋಪಿಯ ಪೂರ್ವಾಪರವನ್ನು ಮಹಿಳೆಯ ಮನೆ ಮಂದಿ ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡುಬಾರದ ಹಿನ್ನೆಲೆಯಲ್ಲಿ, ಮಹಿಳೆ ಮತ್ತು ಮನೆಯವರು ಆರೋಪಿ ಪ್ರಶಾಂತ್ ಕೋಟ್ಯಾನ್ ಎಂಬಾತನನ್ನು ನಿರಾಕರಿಸಿರುತ್ತಾರೆ. ಇದರಿಂದ ಅಸಮಧಾನಗೊಂಡ ಆರೋಪಿ ಮಹಿಳೆಗೆ ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿರುತ್ತಾನೆ. ಅಲ್ಲದೆ ಆರೋಪಿಯು ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುತ್ತಾನೆ. ಈ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2024 ಕಲಂ 354(ಡಿ), 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment