ದಕ್ಷಿಣ ಕನ್ನಡದಲ್ಲಿ ಸೋಲಿಲ್ಲದ ಸರದಾರ ಖ್ಯಾತಿಯ ನಿಕಟಪೂರ್ವ ರಾಜ್ಯಧ್ಯಕ್ಷಗೆ ಗೇಟ್ ಪಾಸ್, ಕ್ಯಾ ಬ್ರಿಜೇಶ್ ಚೌಟಗೆ ಮಣೆ, ಉಡುಪಿಯಲ್ಲಿ ಸರಳ-ಸಜ್ಜನ ರಾಜಕಾರಣಿ ಕೋಟಾಗೆ ಎಂಪಿ ಟಿಕೆಟ್
ನವದೆಹಲಿ, ಮಾರ್ಚ್ 14, 2024 (ಕರಾವಳಿ ಟೈಮ್ಸ್) : ಲೋಕಸಭೆ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಸೇರಿದಂತೆ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ, ಮಂಗಳೂರು ಸಂಸದ ಕಂ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಒಟ್ಟು 8 ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಸಂಸದ ಡಿ ವಿ ಸದಾನಂದ ಗೌಡ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ತುಮಕೂರು ಸಂಸದ ಜಿಎಸ್ ಬಸವರಾಜು (ನಿವೃತ್ತಿ ಘೋಷಿಸಿದ್ದರು), ದಕ್ಷಿಣ ಕನ್ನಡ ಸಂಸದ ಕಂ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ.
ದಕ್ಷಿಣ ಕನ್ನಡದಲ್ಲಿ ಸೋಲಿಲ್ಲದ ಸರದಾರನಾಗಿ ಗೆದ್ದು ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷ ಈ ಬಾರಿ ನಿರೀಕ್ಷೆಯಂತೆ ಗೇಟ್ ಪಾಸ್ ನೀಡಿದೆ. ಅವರ ಬದಲಿಗೆ 42 ರ ಹರೆಯದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಿಟ್ಟಿಂಗ್ ಎಂಪಿ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿರುವ ವರಿಷ್ಠರು ಸರಳ-ಸಜ್ಜನ ರಾಜಕಾರಣಿ ಎಂದೇ ಬಿಂಬಿತವಾಗಿರುವ ಕೋಟಾ ಶ್ರೀನಿವಾಸ ಪೂಜಾರಿಗೆ ಮೊದಲ ಬಾರಿಗೆ ಎಂಪಿ ಟಿಕೆಟ್ ನೀಡಲಾಗಿದೆ.
ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆಯಿಂದ ಪಿ.ಸಿ. ಗದ್ದಿಗೌಡರ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ಮೈಸೂರು ಕ್ಷೇತ್ರದಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಸಿ.ಎನ್. ಮಂಜುನಾಥ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಿ.ಸಿ. ಮೋಹನ್, ತುಮಕೂರು ಕ್ಷೇತ್ರದಿಂದ ವಿ. ಸೋಮಣ್ಣ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎಸ್. ಬಾಲರಾಜು, ಧಾರವಾಡದಿಂದ ಪ್ರಹ್ಲಾದ್ ಜೋಶಿ, ಕೊಪ್ಪಳದಿಂದ ಡಾ. ಬಸವರಾಜ ತ್ಯಾವಟೂರು, ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ್, ಬಳ್ಳಾರಿಯಿಂದ ಬಿ. ಶ್ರೀರಾಮುಲು, ಕಲಬುರಗಿಯಿಂದ ಡಾ. ಉಮೇಶ್ ಜಾಧವ್, ಬೀದರ್ ಕ್ಷೆತ್ರದಿಂದ ಭಗವಂತ ಖೂಬಾ, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಶಿವಮೊಗ್ಗದಿಂದ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.
ಡಾ. ಸಿ.ಎನ್. ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಯದುವೀರ ಕೃಷ್ಣದತ್ತ ಒಡೆಯರ್ (ಮೈಸೂರು-ಕೊಡಗು), ಕ್ಯಾ. ಬ್ರಿಜೇಶ್ ಚೌಟ (ದಕ್ಷಿಣ ಕನ್ನಡ), ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು), ಗಾಯತ್ರಿ ಸಿದ್ದೇಶ್ವರ (ದಾವಣಗೆರೆ) ಡಾ. ಬಸವರಾಜ ಕ್ಯಾವತ್ತೂರ್ (ಕೊಪ್ಪಳ) ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಹೊಸಮುಖಗಳು. ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳನ್ನು ಮೈತ್ರಿ ಪಕ್ಷ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.
0 comments:
Post a Comment