ಬೆಳ್ತಂಗಡಿ, ಮಾರ್ಚ್ 06, 2024 (ಕರಾವಳಿ ಟೈಮ್ಸ್) : ಪಿಕಪ್ ವಾಹನಕ್ಕೆ ಕಾರನ್ನು ಡಿಕ್ಕಿ ಹೊಡೆದುದಲ್ಲದೆ ಮಗುಚಿ ಬಿದ್ದ ಪಿಕಪ್ ವಾಹನಕ್ಕೆ ಕಾರಿನಲ್ಲಿದ್ದವರು ಹೊಡೆದು ಗಾಜು ಪುಡಿ ಮಾಡಿ ಜಖಂಗೊಳಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ಘಟನೆ ಮರೋಡಿ ಗ್ರಾಮದ ಕುಂಜೋಡಿ ಎಂಬಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ.
ಈ ಬಗ್ಗೆ ಪಿಕಪ್ ಚಾಲಕ, ಪೆರಾಡಿ ನಿವಾಸಿ ಸಾಧಿಕ್ ಝೈನುದ್ದೀನ್ (24) ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದು, ಅವರು ಬುಧವಾರ ಬೆಳಗ್ಗಿನ ಜಾವ ಪಿಕ್‍ಅಪ್ ವಾಹನದಲ್ಲಿ ಮರೋಡಿ ಗ್ರಾಮದ ಕುಂಜೋಡಿ ಎಂಬಲ್ಲಿ ತೆರಳುತ್ತಿದ್ದಾಗ, ಎದುರುಗಡೆಯಿಂದ ಕೆಎ19 ಝಡ್ 8972 ನೋಂದಣಿ ಸಂಖ್ಯೆಯ ಕಾರನ್ನು, ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನ ರಸ್ತೆ ಬದಿ ಮಗುಚಿ ಬಿದ್ದಿರುತ್ತದೆ.
ಅಪಘಾತದಿಂದ ಪಿಕಪ್ ವಾಹನ ರಸ್ತೆಯ ಬಲಗಡೆಗೆ ತಿರುಗಿ ನಿಂತಿದ್ದು, ಬಳಿಕ ಅಪಘಾತಪಡಿಸಿದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಹೊರಬಂದು, ಮಗುಚಿ ಬಿದ್ದ ಪಿಕಪ್ ವಾಹನಕ್ಕೆ ಕೈಯಿಂದ ಹೊಡೆಯಲು ಪ್ರಾರಂಭಿಸಿದ್ದು, ಈ ವೇಳೆ ಝೈನುದ್ದೀನ್ ಅವರು ಪಿಕಪ್ ವಾಹನದಿಂದ ಹೊರಬಂದಾಗ, ಅದೇ ವ್ಯಕ್ತಿಗಳು ಅವರಿಗೂ ಹಲ್ಲೆ ನಡೆಸಲು ಮುಂದಾಗಿರುತ್ತಾರೆ. ಈ ವೇಳೆ ಝೈನುದ್ದೀನ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಬಳಿಕ ಆರೋಪಿಗಳು ಘಟನಾ ಸ್ಥಳಕ್ಕೆ ಇನ್ನಿಬ್ಬರನ್ನು ಬರಮಾಡಿ, ಪಿಕಪ್ ವಾಹನದ ಗಾಜುಗಳನ್ನು ಒಡೆದು ಹಾಕಿರುವುದಲ್ಲದೇ, ವಾಹನದ ಬಾಗಿಲನ್ನು ಜಖಂಗೊಳಿಸಿರುತ್ತಾರೆ. ಇದರಿಂದಾಗಿ ಝೈನುದ್ದೀನ್ ಅವರಿಗೆ ಸುಮಾರು 3 ಲಕ್ಷ ರೂಪಾಯಿ ನಷ್ಟ ಉಂಟಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment