ಬಂಟ್ವಾಳ, ಮಾರ್ಚ್ 28, 2024 (ಕರಾವಳಿ ಟೈಮ್ಸ್) : ಬಿಜೆಪಿಗರು ಹಿಂದುತ್ವವನ್ನು ಕೇವಲ ಓಟ್ ಬ್ಯಾಂಕ್ ಆಗಿ ಉಪಯೋಗಿಸಿ ತಮ್ಮ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆಯೇ ಹೊರತು ಇನ್ನೇನೂ ಅಲ್ಲ. ಬಿಜೆಪಿಗರ ನಕಲಿ ಹಿಂದುತ್ವಕ್ಕೆ ಜನ ಬಲಿಯಾಗದೆ ಈ ಬಾರಿ ಜನರಪರ ಕಾರ್ಯಕ್ರಮ ಆಯೋಜಿಸಿ ಮನೆ-ಮನ ಬೆಳಗಿಸಿದ ಕಾಂಗ್ರೆಸ್ ಬೆಂಬಲಿಸಿ ದೇಶದ ಅಭಿವೃದ್ದಿಗೆ ಸಹಕರಿಸಿ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಕರೆ ನೀಡಿದರು.
ಚುನಾವಣಾ ಪ್ರಚಾರ ಉಸ್ತುವಾರಿ, ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರ ಕೋಟೆ ಎಂಬ ಆಲೋಚನೆ ತಲೆಯಲ್ಲಿದ್ದರೆ ಅದನ್ನು ಇಂದೇ ತೆಗೆದು ಬಿಸಾಡಿ, ದಕ್ಷಿಣದಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬ ಪ್ರಚಾರ ಈ ಬಾರಿ ಸುಳ್ಳಾಗಲಿದೆ. ಜಿಲ್ಲೆಯ ಈ ಹಿಂದಿನ ಕಾಂಗ್ರೆಸ್ ವೈಭವ ಮತ್ತೆ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದುವರೆಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವಾಗಲೀ, ಕಾಂಗ್ರೆಸ್ಸಿನ ಸಿದ್ದಾಂತವಾಗಲೀ ಸೋಲನುಭವಿಸಿಲ್ಲ, ಬದಲಾಗಿ ಬಿಜೆಪಿಗರ ಅಪಪ್ರಚಾರ ಕೆಲವು ಸಮಯ ರಾರಾಜಿಸಿದೆ. ಇನ್ನು ಅದೆಲ್ಲ ನಡೆಯುವುದಿಲ್ಲ. ಅಪಪ್ರಚಾರದ ಆಯುಷ್ಯ ಮುಗಿದಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಈಡೇರಿಸಿದ ಭರವಸೆಗಳು, ಬಡವರ ಮನೆಗಳು ಬೆಳಗಿರುವುದು ಇನ್ನು ಮುಂದೆ ರಾರಾಜಿಸಲಿದೆ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಈ ದೇಶದಲ್ಲಿ ಬಡವರ ಪರ ಕೆಲಸ ಮಾಡುವ ಏಕಮಾತ್ರ ರಾಜಕೀಯ ಪಕ್ಷ ಅದು ಕಾಂಗ್ರೆಸ್ ಮಾತ್ರ. ಸ್ವಾತಂತ್ರ್ಯಾ ನಂತರ ಬಡವರ ಪರ ಯೋಜನೆಗಳನ್ನು ಹಾಕಿಕೊಂಡು ಮಾತ್ರ ಕಾಂಗ್ರೆಸ್ ಬಂದಿದೆ ಹೊರತು ಯಾವುದೇ ಸಂದರ್ಭದಲ್ಲೂ ಅಧಿಕಾರಕ್ಕಾಗಿ ಜನರ ಭಾವನೆಗಳ ಜೊತೆ ಜಾತಿ-ಮತಗಳ ಹೆಸರಿನಲ್ಲಿ ಚೆಲ್ಲಾಟ ಆಡಿಲ್ಲ. ಇನ್ನು ಮುಂದೆಯೂ ಕಾಂಗ್ರೆಸ್ ಬಡವರ ಪರವಾಗಿಯೇ ಕೆಲಸ ಮಾಡಲಿದೆ. ಅಧಿಕಾರಕ್ಕಾಗಿ ಜನರ ಮದ್ಯೆ ಹುಳಿ ಹಿಂಡುವುದಾಗಲೀ, ಸ್ವಾರ್ಥ ಬೇಳೆ ಬೇಯಿಸುವುದಾಗಲೀ ಮಾಡುವುದಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಎಂ ಎಲ್ ಸಿ ಹರೀಶ್ ಕುಮಾರ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಎಂ ಅಶ್ವನಿ ಕುಮಾರ್ ರೈ, ಬಿ ಪದ್ಮಶೇಖರ್ ಜೈನ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment