ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಪರೀಕ್ಷೆ ನಡೆಸಲು ಅನುಮತಿ ನೀಡಿದ ವಿಭಾಗೀಯ ಪೀಠ : ಸೋಮವಾರದಿಂದ ನಿಗದಿಯಂತೆ ಬೋರ್ಡ್ ಪರೀಕ್ಷೆಗಳು ಆರಂಭ
ಬೆಂಗಳೂರು, ಮಾರ್ಚ್ 07, 2024 (ಕರಾವಳಿ ಟೈಮ್ಸ್) : ಮಹತ್ವದ ಬೆಳವಣಿಗೆಯಲ್ಲಿ 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಅನುಮತಿ ನೀಡಿದೆ. ನಿನ್ನೆಯಷ್ಟೆ 5, 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ಸರಕಾರದ ಅಪೀಲಿಗೆ ಅಸ್ತು ಎಂದಿದೆ. ಇದರಿಂದಾಗಿ ನಿಗದಿಯಂತೆ ಸೋಮವಾರದಿಂದ ಬೋರ್ಡ್ ಪರೀಕ್ಷೆಗಳು ನಡೆಯಲಿವೆ.
2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಸರಕಾರದ ಈ ಆದೇಶವನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ (ಅವರ್ ಸ್ಕೂಲ್ಸ್) ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿತ್ತು. ಆದರೆ ರಾಜ್ಯ ಸರಕಾರ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು.
9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಹೇಳಿಕೊಂಡಿದ್ದರು. ಇದರಿಂದ ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಗೆ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೂಲೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.
ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ 2023ರ ಅ. 6 ಮತ್ತು 9 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ ಈ ಸುತ್ತೋಲೆಯನ್ನು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ (ಅವರ್ ಸ್ಕೂಲ್ಸ್) ಹೈಕೋರ್ಟ್‍ನಲ್ಲಿ ಪ್ರಶ್ನಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ ಹೊಸಮಿ ಅವರ ಏಕಸದಸ್ಯ ಪೀಠ ಬೋರ್ಡ್ ಪರೀಕ್ಷೆ ಸುತ್ತೋಲೆಯನ್ನು ರದ್ದು ಮಾಡಿ ನಿನ್ನೆ ದಿನ ತೀರ್ಪು ನೀಡಿತ್ತು.
ಆದರೆ ಈ ತೀರ್ಪಿನ ವಿರುದ್ಧ ಸರಕಾರ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ. ಬೋರ್ಡ್ ಪರೀಕ್ಷೆಗೆ ಅನುಮತಿ ನೀಡುವ ಮೂಲಕ ಏಕಸದಸ್ಯ ನೀಡಿದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಸರಕಾರ ಹಾಗೂ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಹಗ್ಗ ಜಗ್ಗಾಟದಿಂದ ಈ ವರ್ಷವೂ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದರು. ಆದರೆ ಪರೀಕ್ಷೆಗೆ ಮೂರು ದಿನ ಬಾಕಿ ಇರುವಂತೆ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡುವ ಮೂಲಕ ಇದೀಗ ಗೊಂದಲಕ್ಕೆ ಪೂರ್ಣ ತೆರೆ ಎಳೆದಿದೆ. ಮಾರ್ಚ್ 11 ರಿಂದ 5,8,9 ಹಾಗೂ 11ನೇ ತರಗತಿಗಳ ಪರೀಕ್ಷೆಗಳು ಆರಂಭಗೊಳ್ಳಲಿದೆ.
ಕಳೆದ ವರ್ಷವೂ 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ನಿಗದಿಪಡಿಸಿ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆ-2009ರಡಿ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನೂ ರುಪ್ಸಾ ಹಾಗೂ ಅವರ್ ಸ್ಕೂಲ್ಸ್ ಸಂಘಟನೆಗಳು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದವು. ಅಧಿಸೂಚನೆಯನ್ನು 2023ರ ಫೆಬ್ರವರಿಯಲ್ಲಿ ನ್ಯಾ. ಪ್ರದೀಪ್‍ಸಿಂಗ್ ಯೆರೂರ್ ಅವರ ನ್ಯಾಯಪೀಠ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು. ಆಗ ಪರೀಕ್ಷೆಗೆ ಎರಡು-ಮೂರು ದಿನಗಳಷ್ಟೇ ಇದ್ದ ಕಾರಣ ಪರೀಕ್ಷೆಗಳು ನಡೆಯಲಿ. ಆದರೆ, ಫಲಿತಾಂಶ ಮೇಲ್ಮನವಿಯಲ್ಲಿನ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿತ್ತು. ಈ ಮಧ್ಯೆ ಮೇಲ್ಮನವಿಯನ್ನು ಸರಕಾರ ವಾಪಸ್ ಪಡೆದುಕೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
0 comments:
Post a Comment