ಬೆಂಗಳೂರು, ಫೆಬ್ರವರಿ 08, 2024 (ಕರಾವಳಿ ಟೈಮ್ಸ್) : ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ ಐ ಎಸ್ ಎ) ಅಖಿಲ ಭಾರತ ಮಟ್ಟದಲ್ಲಿ ಯುವ ಭಾರತದ ಜನಾಭಿಮತ ಹೆಸರಿನಲ್ಲಿ ಪೆಬ್ರವರಿ 7 ರಿಂದ 9 ರ ತನಕ ಮೂರು ದಿನ ವಿದ್ಯಾರ್ಥಿಗಳ ಮದ್ಯೆ ವರ್ಷದಿಂದ ವರ್ಷಕ್ಕೆ ಫೀ ಹೆಚ್ಚಳ ಸರಿಯೇ? ಕೇಂದ್ರ ಸರಕಾರವು ಹಾಸ್ಟೆಲ್ ಮತ್ತು ಸ್ಕಾಲರ್ ಶಿಫ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆಯೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ಈಡೇರಿದೆಯೇ? ಎಂಬ ಮೂರು ಪ್ರಶ್ನೆಗಳನ್ನು ಮುಂದಿಟ್ಟು ದೇಶಾದ್ಯಂತ ಅಭಿಯಾನಕ್ಕೆ ಕರೆ ನೀಡಿತ್ತು. ಇದರ ಅಂಗವಾಗಿ ಬುಧವಾರ (ಫೆ 7) ರಾಜ್ಯದ ವಿವಿಧ ಕಡೆಗಳಲ್ಲಿ ಬೆಂಗಳೂರು ವಿವಿ, ವಿಜಯ ನಗರ ಕೃಷ್ಣ ದೇವರಾಯ ವಿವಿ, ಹಾಗೂ ಗಂಗಾವತಿ, ಕೊಟ್ಟೂರು, ಹರಪನಹಳ್ಳಿ, ದಕ್ಷಿಣ ಕನ್ನಡ, ಮಣಿಪಾಲ ಮೊದಲಾದೆಡೆಗಳಲ್ಲಿ ಅಭಿಯಾನ ನಡೆಸಲಾಯಿತು.
ಅಭಿಯಾನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಅಭಿಯಾನ ಯಶಸ್ವಿಯಾಗಿ ನಡೆಯಿತು. ಈ ಅಭಿಯಾನವು 2024ರ ಲೋಕಸಭಾ ಚುನಾವಣೆಯಲ್ಲಿ ವಿದ್ಯಾರ್ಥಿ ಯುವಜನರ ಅಭಿಪ್ರಾಯಗಳನ್ನು ಪಡೆಯುವ ಪ್ರಯತ್ನವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ, ಶುಲ್ಕ ಹೆಚ್ಚಳ, ನಿರುದ್ಯೋಗ, ಪ್ರವೇಶ ಪರೀಕ್ಷೆಗಳ ಕೇಂದ್ರೀಕರಣ ಹಾಗೂ ಶಿಕ್ಷಣ ಕ್ಷೇತ್ರದ ದುರ್ಬಲಗೊಳಿಸುವ ಕೇಂದ್ರ ಸರಕಾರದ ನೀತಿಗಳ ಮೇಲೆ ವಿದ್ಯಾರ್ಥಿ ಯುವ ಜನರನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ ಐಸಾ ದೇಶದಾದ್ಯಂತ ಈ ಅಭಿಯಾನವನ್ನು ಸಂಘಟಿಸಿದೆ.
ವಿದ್ಯಾರ್ಥಿ ಯುವ ಜನರು ವಿಭಜನಾ ರಾಜಕೀಯ ಶಕ್ತಿಗಳನ್ನು ತಿರಸ್ಕರಿಸಿ ಗುಣ ಮಟ್ಟದ ಶಿಕ್ಷಣ, ಉದ್ಯೋಗ, ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಮುಂತಾದ ವಿಷಯಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಶ್ರಮಿಸಬೇಕಿದೆ ಎಂದು ಐಸಾ ಒತ್ತಾಯಿಸುತ್ತದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎ ಐ ಎಸ್ ಎ) ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
0 comments:
Post a Comment