ಬಂಟ್ವಾಳ, ಫೆಬ್ರವರಿ 02, 2024 (ಕರಾವಳಿ ಟೈಮ್ಸ್) : ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 13 ರಿಂದ 23ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ತುಂಬೆ ಹೆದ್ದಾರಿ ಬದಿಯಲ್ಲಿ ಗಿಡ ನೆಡುವ ಉದ್ದೇಶದಿಂದ ತೆಗೆಯಲಾಗಿರುವ ಹೊಂಡಗಳನ್ನು ತಾತ್ಕಾಲಿಕವಾಗಿ ತಕ್ಷಣ ಮುಚ್ಚಬೇಕು. ದೇವಸ್ಥಾನಕ್ಕೆ ಬರುವ ವಾಹನಗಳ ಅನುಕೂಲಕ್ಕಾಗಿ ತಾತ್ಕಾಲಿಕ ನೆಲೆಯಲ್ಲಿ ದೇವಳದ ಮುಂಭಾಗದಲ್ಲಿ ಹೆದ್ದಾರಿ ವಿಭಾಜಕವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು ಟಿ ಖಾದರ್ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಗುರುವಾರ ಸಂಜೆ ದೇವಳಕ್ಕೆ ಭೇಟಿ ನೀಡಿ ಅಧಿಕಾರಿ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಹ್ಮಕಶೋತ್ಸವದ ಅವಧಿಯಲ್ಲಿ ವಿಶೇಷವಾಗಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಅದ್ಯತೆ ನೀಡಬೇಕು. 10 ದಿನಗಳ ಮಟ್ಟಿಗೆ ಸುಸೂತ್ರ ವ್ಯವಸ್ಥೆಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಯಾವುದೇ ಕಾರಣಕ್ಕೆ ಈ ಸಂದರ್ಭಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಬಾರದು. ಭದ್ರತಾ ವ್ಯವಸ್ಥೆಗಾಗಿ ದೇವಳದ ಹೊರಭಾಗದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು ಹಾಗೂ ಬ್ರಹ್ಮಕಲಶದ 10 ದಿನಗಳ ಕಾಲ ಗ್ರಾಮಾಂತರ ಬಸ್ಸುಗಳನ್ನು ದೇವಸ್ಥಾನದ ಮುಂಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತುಂಬೆಯಲ್ಲಿ ಜನತೆಯ ಪರಿಶ್ರಮ, ತ್ಯಾಗದ ಫಲವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪವಿತ್ರ ಮತ್ತು ಸೌರ್ಹಾತೆಯ ಕೇಂದ್ರವಾಗಿ ಎದ್ದು ನಿಂತಿದೆ. ಇದೀಗ ಇಲ್ಲಿನ ಜನರ ಬಹುಕಾಲದ ಬೇಡಿಕೆ ಈಡೇರಿದೆ ಎಂದ ಸ್ಪೀಕರ್ ಖಾದರ್ ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಬ್ರಹ್ಮಕಲಶದ ಯಶಸ್ವಿಗೆ ಸಹಕಾರ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಸಾದ್ ಸಹಿತ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು, ಜೀರ್ಣೋದ್ದಾರ,ಬ್ರಹ್ಮಕಲಶ ಸಮಿತಿಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಮಿತಿ ಪದಾಧಿಕಾರಿಗಳಾದ ಜೀವನ್ ಆಳ್ವ, ಅರುಣ್ ಆಳ್ವ, ಉಮೇಶ್ ಸುವರ್ಣ, ಗಣೇಶ್ ಸಾಲಿಯಾನ್, ರಾಮಚಂದ್ರ ಸುವರ್ಣ, ಗೋಪಾಲಕೃಷ್ಣ ಸುವರ್ಣ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಲೋಲಾಕ್ಷ ಶೆಟ್ಟಿ ಉಮೇಶ್ ರೆಂಜೋಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment