ಮಂಗಳೂರು, ಫೆಬ್ರವರಿ 16, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಳೆಗುಂದಿರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ವಿರಾಜಮಾನವಾಗಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯೇ ಗೆದ್ದು ಬರುವ ನಿಟ್ಟಿನಲ್ಲಿ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಕಡಲ ನಗರಿಯಲ್ಲಿ ಹಮ್ಮಿಕೊಂಡಿದೆ.
ಫೆಬ್ರವರಿ 17 ರಂದು (ನಾಳೆ) ಅಪರಾಹ್ನ 2 ಗಂಟೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಕಾಂಗ್ರೆಸ್ ನಾಯಕರ ದಂಡೇ ನಾಳೆ ಮಂಗಳೂರಿಗೆ ಬಂದಿಳಿಯಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಆರೋಗ್ಯ ಸಚಿವರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ, ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಸಹಿತ ವಿವಿಧ ಮಂತ್ರಿಗಳು, ಶಾಸಕರು, ಪಕ್ಷದ ನಾಯಕರುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಬೃಹತ್ ರಾಜ್ಯಮಟ್ಟದ ಸಮಾವೇಶಕ್ಕೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಸಮಾವೇಶದ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದೆ. ಪಕ್ಷದ ನಾಯಕರ ಸ್ವಾಗತಕ್ಕೆ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ತುದಿಗಾಲಲ್ಲಿ ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಸಕಲ ರೀತಿಯಲ್ಲೂ ಸಿದ್ದವಾಗಿದ್ದು, ಚುನಾವಣಾ ರಣ ಕಹಳೆ ಈ ಬಾರಿ ಹಿಂದುತ್ವ ಬಲವಾಗಿ ಬೇರೂರಿರುವ ಮಂಗಳೂರಿನಿಂದಲೇ ಮೊಳಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ ಹಿನ್ನಲೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನ ನಾಳೆ ಕೈ ಬಾವುಟಗಳಿಂದ ರಾರಾಜಿಸಲಿದೆ.
0 comments:
Post a Comment