ಬಂಟ್ವಾಳ, ಫೆಬ್ರವರಿ 06, 2024 (ಕರಾವಳಿ ಟೈಮ್ಸ್) : ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿರುವ ಪ್ರಶಾಂತ್ ಕಾಜವ ಹಾಗೂ ಯು ಟಿ ಖಾದರ್ ಅವರ ಸಹೋದರ ಧರ್ಮೀಯ ಹಿತೈಷಿಗಳೂ, ಮಿತ್ರರೂ ಸೇರಿ ಕಳೆದ ಚುನಾವಣೆ ಸಂದರ್ಭದಲ್ಲಿ ಹರಕೆಯ ರೂಪದಲ್ಲಿ ಸಂಕಲ್ಪಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಕಾರಣಿಕ ಕ್ಷೇತ್ರ ಶ್ರೀ ಕ್ಷೇತ್ರ ಪಣೋಲಿಬೈಲು ಇಲ್ಲಿ ಭಾನುವಾರ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಪೀಕರ್ ಯು ಟಿ ಖಾದರ್ ಸಹಿತ ಹಲವು ಗಣ್ಯರು, ಅಭಿಮಾನಿಗಳು ಭಾಗವಹಿಸಿದ್ದರು.
ಯು ಟಿ ಖಾದರ್ ಅಭಿಮಾನಿಗಳು ಹೊತ್ತಿದ್ದ ಹರಕೆಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸುವ ವೇಳೆ ಹಾಜರಾಗಿದ್ದ ಯು ಟಿ ಖಾದರ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಫತ್ವಾ ರೂಪದಲ್ಲಿ ಕಮೆಂಟ್ ಮಾಡಿದ್ದ ಸಾಲೆತ್ತೂರು ಫೈಝಿ ಎಂಬ ವ್ಯಕ್ತಿಗೆ ಹೆಸರು ಪ್ರಸ್ತಾಪಿಸದೆ ತೀಕ್ಷ್ಣವಾಗಿ ಪ್ರತಿಕ್ರಯಿಸಿರುವ ಸ್ಪೀಕರ್ ಯು ಟಿ ಖಾದರ್ ಅವರು ನಾನು ಎಲ್ಲಾ ಧರ್ಮೀಯರ ಭಾವೆನಗಳನ್ನೂ ಸಮಾನವಾಗಿ ಗೌರವಿಸುತ್ತೇನೆ. ಅದಕ್ಕೆ ಜಾತಿ-ಧರ್ಮದ ಲೇಪ ಯಾವತ್ತೂ ಹಚ್ಚಿಲ್ಲ. ಈ ಬಗ್ಗೆ ಯಾರೋ ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಗೀಚಿದ ಎಂಬ ಕಾರಣಕ್ಕೆ ಅದಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಒಬ್ಬ ಗೀಚಿರಬಹುದು. ಆದರೆ ಧಾರ್ಮಿಕ ಸೌಹಾರ್ದತೆ ಹಾಗೂ ಧಾರ್ಮಿಕ ಭಾವನೆ ಗೌರವಿಸುವ ನನ್ನ ನಿರ್ಧಾರಕ್ಕೆ ನೂರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನ ಜೊತೆ ಎಲ್ಲ ಧರ್ಮೀಯರೂ ಇದ್ದಾರೆ. ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಲೇ ನಾನು ಅವರ ಮಿತ್ರತ್ವ ಸಂಪಾದಿಸಿದ್ದೇನೆ. ನನ್ನ ಕ್ಷೇತ್ರ ಮತದಾರರು ಅಥವಾ ಅಭಿಮಾನಿಗಳು ಯಾರೇ ಆಗಲೀ ಯಾವುದೇ ಕಾರ್ಯಕ್ರಮಕ್ಕೆ ಆಗಲೀ ಆಹ್ವಾನಿಸಿದರೂ ಅಲ್ಲಿ ಹಾಜರಾಗುವುದು ನನ್ನ ಸಂಸ್ಕøತಿ. ಅದನ್ನು ಹಿಂದೆಯೂ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ.
0 comments:
Post a Comment