ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿ ಸರಕಾರದಿಂದ ನೂತನ ನಿಯಮ ಜಾರಿ : ಸಾರ್ವಜನಿಕರ ಆಕ್ರೋಶ - Karavali Times ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿ ಸರಕಾರದಿಂದ ನೂತನ ನಿಯಮ ಜಾರಿ : ಸಾರ್ವಜನಿಕರ ಆಕ್ರೋಶ - Karavali Times

728x90

14 February 2024

ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿ ಸರಕಾರದಿಂದ ನೂತನ ನಿಯಮ ಜಾರಿ : ಸಾರ್ವಜನಿಕರ ಆಕ್ರೋಶ

ಸರಕಾರ ನಿಯಮ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆಗೆ ಸಾರ್ವಜನಿಕರ ಸಿದ್ದತೆ 


ಮಂಗಳೂರು, ಫೆಬ್ರವರಿ 14, 2024 (ಕರಾವಳಿ ಟೈಮ್ಸ್) : ಗ್ರಾಮಾಂತರ ಪ್ರದೇಶಗಳಲ್ಲಿ ಸದ್ಯ 25 ಸೆಂಟ್ಸ್ ವರೆಗಿನ ಭೂಪರಿವರ್ತಿತ ಜಮೀನಿಗೆ ಗ್ರಾಮ ಪಂಚಾಯತ್ ಹಾಗೂ 1 ಎಕ್ರೆವರೆಗಿನ ಜಮೀನಿಗೆ ತಾಲೂಕು ಪಂಚಾಯತ್ ನೀಡುತ್ತಿದ್ದ ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಸರಕಾರದ ನೂತನ ನಿಯಮಾವಳಿಯಂತೆ ಇನ್ನು ಮುಂದಕ್ಕೆ ಜಿಲ್ಲಾ ಕೇಂದ್ರದಲ್ಲಿರುವ ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯಿಂದಲೇ ಪಡೆಯಬೇಕು ಎಂಬ ನಿಯಮದ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. 

ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿ ಇತರ ಗ್ರಾಮಾಂತರ ಪ್ರದೇಶಗಳಲ್ಲಿನ 1000 ಚದರ ಮೀಟರ್ ಅಂದರೆ 0.25 ಎಕ್ರೆ ಭೂ ಪರಿವರ್ತಿತ ಜಮೀನಿಗೆ ಗ್ರಾಮ ಪಂಚಾಯತಿನಿಂದ ಏಕ ನಿವೇಶನ ವಿನ್ಯಾಸ ಅನುಮೋದನೆ ಹಾಗೂ 1 ಎಕ್ರೆವರೆಗಿನ ಭೂ ಪರಿವರ್ತಿತ ಜಮೀನಿಗೆ ತಾಲೂಕು ಪಂಚಾಯತಿನಿಂದ  ಕಾರ್ಯನಿರ್ವಹಣಾಧಿಕಾರಿಗಳು ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ನೀಡಲಾಗುತ್ತಿತ್ತು. ಇದು 2014 ರಿಂದ 2024ರ ಜನವರಿ 9ರವರೆಗೂ ಚಾಲ್ತಿಯಲ್ಲಿದ್ದ ನಿಯಮವಾಗಿತ್ತು. ಈ ನಿಯಮದಿಂದಾಗಿ ಗ್ರಾಮಾಂತರ ಪ್ರದೇಶದ ಜನ ತಮ್ಮ ಭೂ ಪರಿವರ್ತಿತ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬಹಳಷ್ಟು ಸಹಕಾರಿಯಾಗಿತ್ತು. 

ಆದರೆ ಇದೀಗ ನೂತನ ಸರಕಾರ ಈ ನಿಯಮವನ್ನು ತಡೆಹಿಡಿದು 2014ರ ಪೂರ್ವದಲ್ಲಿ ಇದ್ದಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರತಾದ ಗ್ರಾಮಾಂತರ ಪ್ರದೇಶದಲ್ಲಿ ಭೂ ಪರಿವರ್ತಿತ ಜಮೀನಿಗೆ ಏಕ ನಿವೇಶನ ಹಾಗೂ ಬಹುನಿವೇಶನ ವಿನ್ಯಾಸ ಅನುಮೋದನೆಯನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರಡಿಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸರಕಾರ ಈ ನಿಯಮ ಇದೀಗ ಗ್ರಾಮಾಂತರ ಪ್ರದೇಶದ ಜನರ ರಕ್ತ ಹೀರುವ ನಿಯಮವಾಗಿದೆ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. 

ಸರಕಾರದ ನೂತನ ನಿಯಮದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ ಈ ಎಲ್ಲ ತಾಲೂಕುಗಳ ಗ್ರಾಮಾಂತರ ಪ್ರದೇಶದ ಜನರು ಕೂಡಾ ಕೇವಲ 5 ಸೆಂಟ್ಸ್ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಬೇಕಾದರೂ ಏಕ ನಿವೇಶನ ಅನುಮೋದನೆಗಾಗಿ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಗೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಲಿದೆ. 

ಸರಕಾರದ ಈ ನಿಯಮದಂತೆ ಸಾರ್ವಜನಿಕರು ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಜಿಲ್ಲೆಯಿಂದ ಕೊನೆಯ ತಾಲೂಕಿನ ಜನ ಕೂಡಾ ಜಿಲ್ಲಾ ಕೇಂದ್ರಕ್ಕೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಇರುವುದರಿಂದ ಹಣ, ಸಮಯ ವ್ಯರ್ಥತೆಯ ಸಮಸ್ಯೆಗಳ ಜೊತೆಗೆ ಭ್ರಷ್ಟಾಚಾರಕ್ಕೂ ಇದು ಎಡೆಮಾಡಕೊಡಲಿದೆ ಎಂಬುದು ಸಾರ್ವಜನಿಕರ ಆತಂಕ. ಅಲ್ಲದೆ ಇಡೀ ಜಿಲ್ಲೆಯ ಎಲ್ಲ ಗ್ರಾಮಾಂತರ ಪ್ರದೇಶಗಳ ಜನರ ಕೆಲಸ ಕೂಡಾ ಜಿಲ್ಲಾ ಮಟ್ಟದ ಒಂದೇ ಕಚೇರಿಯಲ್ಲಿ ನಡೆಯುವುದರಿಂದ ಸದ್ರಿ ಜಿಲ್ಲಾ ಮಟ್ಟದ ಕಛೇರಿಯಲ್ಲಿ ಸಿಬ್ಬಂದಿ ಕೊರತೆಯೂ ಎದುರಾಗಲಿದೆ. ಇದರಿಂದ ಜನರ ಕೆಲಸ-ಕಾರ್ಯಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ದೀರ್ಘ ಕಾಲ ಅಲೆದಾಟ ನಡೆಸಬೇಕಾಗಿ ಬರಬಹುದು. ಅಲ್ಲದೆ ಪ್ರಸ್ತುತ ಇರುವ ಟೌನ್ ಪ್ಲಾನರ್ ಅಧಿಕಾರಿ ಇಡೀ ಜಿಲ್ಲೆಯ ಗ್ರಾಮ ಪಂಚಾಯತಿಗಳಿಂದ ಬರುವ ಕಡತಗಳ ವಿಲೆವಾರಿಗೆ ಸ್ಥಳ ಪರಿಶೀಲನೆ ನಡೆಸಬೇಕಾಗಿರುವುದರಿಂದ ಸಾಕಷ್ಟು ಹೊರೆಯಾಗುವುದರ ಜೊತೆಗೆ ಕೆಲಸ-ಕಾರ್ಯಗಳು ವಿಳಂಬವಾಗಲಿದೆ. ಸದ್ಯ ಗ್ರಾಮ ಪಂಚಾಯತಿಗಳಲ್ಲೇ ನೀಡುವ ಈ ವ್ಯವಸ್ಥೆ ತಿಂಗಳುಗಟ್ಟಲೆ ವ್ಯಯಿಸುತ್ತಿದ್ದು ಇನ್ನು ಇಡೀ ಜಿಲ್ಲೆಯದ್ದೇ ಒಂದೇ ವ್ಯವಸ್ಥೆಯಡಿ ಬಂದರೆ ಅದೆಷ್ಟು ತಿಂಗಳು ವ್ಯಯಿಸಲಿದೆ ಎಂಬುದೇ ಜನರ ಆತಂಕಕ್ಕೆ ಕಾರಣವಾಗಿದೆ. 

ಸರಕಾರದ ಈ ನಿಯಮದಿಂದ ಬಡ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವ ಹಿನ್ನಲೆಯಲ್ಲಿ ಜನಸಾಮಾನ್ಯರ ಕಷ್ಟಗಳನ್ನು ಸರಕಾರ ತಕ್ಷಣ ಅರ್ಥ ಮಾಡಿಕೊಂಡು ಈ ವಿನ್ಯಾಸ ಅನುಮೋದನೆ ನಿಯಮವನ್ನು ಬದಲಾಯಿಸದೆ ಈ ಹಿಂದಿನ ಅದೇ ನಿಯಮವನ್ನು ಮುಂದುವರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿ ಸರಕಾರದಿಂದ ನೂತನ ನಿಯಮ ಜಾರಿ : ಸಾರ್ವಜನಿಕರ ಆಕ್ರೋಶ Rating: 5 Reviewed By: karavali Times
Scroll to Top