ಬಂಟ್ವಾಳ, ಫೆಬ್ರವರಿ 16, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಸರಕಾರ ಮತ್ತೊಂದು ಜನಪರ ಬಜೆಟ್ ಮಂಡನೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 15ನೇ ಬಜೆಟ್ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರಿಗೆ ಪಾಲು ನೀಡಲಾಗಿದೆ. ಇದು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಧ್ಯೇಯದಿಂದ ಕೂಡಿರುವ ಸರ್ವರ ಅಭಿವೃದ್ಧಿಯ ಗ್ಯಾರಂಟಿ ಬಜೆಟ್ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಶ್ಲಾಘಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಅವರು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವುದು ಖುಷಿಯ ವಿಚಾರ. ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಬೃಹತ್ ಮೊತ್ತದ ಯೋಜನೆ, 10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರರ ಪರಿಹಾರ ಮೊತ್ತ ಹೆಚ್ಚಳ, ಸಮುದ್ರ ಆಂಬುಲೆನ್ಸ್ ಯೋಜನೆ, ಒಳನಾಡು ಸಾರಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಮಂಗಳೂರು ನಗರದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ, ಮಂಗಳೂರು ಬಂದರಿನಿಂದ ಬೆಂಗಳೂರುವರೆಗೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣ, ಮಾವಿನಕುರ್ವೆಯಲ್ಲಿ 3048 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ 2ನೇ ಬೃಹತ್ ಬಂದರ್ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಟೆಂಡರ್, ಹೊನ್ನಾವರದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ, ಉತ್ತರ ಕನ್ನಡದಲ್ಲಿ 4,200 ಕೋಟಿ ರೂಪಾಯಿ ಅಂದಾಜು ಯೋಜನಾ ವೆಚ್ಚದಲ್ಲಿ ಹೊಸ ಆಳ ಸಮುದ್ರ ಸರ್ವಋತು ಬಂದರು ಸ್ಥಾಪನೆ, ಮುರ್ಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕಾ ಹೊರ ಬಂದರು ನಿರ್ಮಾಣ, ಸಾಗರಮಾಲಾ ಯೋಜನೆಯಡಿ ರಾಜ್ಯದ ಪಾಲಿನಲ್ಲಿ 26 ಕಾಮಗಾರಿಗಳ ಅನುಷ್ಠಾನ, ಮಂಗಳೂರು ನಗರದ ಸಮೀಪ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ, ಮಂಗಳೂರಿನಲ್ಲಿ ಹಜ್ ಭವನದ ನಿರ್ಮಾಣಕ್ಕೆ ಅನುದಾನ, ನೇತ್ರಾವತಿ ನದಿಗಳಲ್ಲಿ ಜಲ ಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸುವ ಆಶ್ವಾಸನೆ, ಸ್ವಸಹಾಯ ಗುಂಪುಗಳಿಗೆ ಸಿಕ್ಕಿರುವ ಅನುದಾನ ಸೇರಿದಂತೆ ಕರಾವಳಿಗೆ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗೆ ಬಜೆಟಿನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಕರಾವಳಿಯ ಜನರ ಪರವಾಗಿ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ರಮಾನಾಥ ರೈ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment