ಪುತ್ತೂರು, ಫೆಬ್ರವರಿ 03, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜನವರಿ 11 ರಂದು ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ ಬೇಧಿಸಿದ ಬೆಳ್ಳಾರೆ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಮುಖ ಸುಲಿಗೆಕೋರ ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ನೌಶಾದ್ ಬಿ ಎ (36) ಹಾಗೂ ಸುಲಿಗೆಗೆ ಸಹಕರಿಸಿದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉದ್ಯಾವರ ನಿವಾಸಿ ಚಂದ್ರಮೋಹನ್ (42) ಎಂದು ಗುರುತಿಸಲಾಗಿದೆ.
ಜನವರಿ 11 ರಂದು ಮಧ್ಯಾಹ್ನ ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2024 ಕಲಂ 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೀಘ್ರ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದರು.
ತನಿಖಾ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಬಂಧಿತರಿಂದ 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಲಕ್ಷ ರೂಪಾಯಿ ಮೌಲ್ಯದ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಪತ್ತೆಗಾಗಿ ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್, ಎಡಿಶನಲ್ ಎಸ್ಪಿ ಧರ್ಮಪ್ಪ ಹಾಗೂ ರಾಜೇಂದ್ರ ಅವರುಗಳ ಮುಂದಾಳತ್ವದಲ್ಲಿ, ಪುತ್ತೂರು ಎಎಸ್ಪಿ ಅರುಣ್ ನಾಗೇಗೌಡ ಅವರ ನೇತೃತ್ವದಲ್ಲಿ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ಮೋಹನ್ ಕೊಠಾರಿ, ಬೆಳ್ಳಾರೆ ಪೆÇಲೀಸ್ ಠಾಣಾ ಪಿಎಸ್ಸೈಗಳಾದ ಸಂತೋಷ್ ಬಿ ಪಿ ಹಾಗೂ ಅಶೋಕ್ ಸಿಎಂ ಅವರ ಎರಡು ವಿಶೇಷ ತನಿಖಾ ತಂಡಗಳು ಈ ಕಾರ್ಯಚರಣೆ ನಡೆಸಿದೆ.
ಕಾರ್ಯಾಚರಣಾ ತಂಡದಲ್ಲಿ ಎಎಸ್ಸೈ ದಾಮೋದರ ನಾಯ್ಕ, ಸಿಬ್ಬಂದಿಗಳಾದ ನವೀನ್ ಕಟ್ಟತ್ತಾರು, ಸತೀಶ್ ಬಿ, ಕೃಷ್ಣಪ್ಪ, ಚಂದ್ರಶೇಖರಗೌಡ, ಚಂದ್ರಶೇಖರ ಗೆಜ್ಜಳ್ಳಿ, ಮಂಜುನಾಥ, ಚೇತನ, ಪ್ರವೀಣ ಬಾರ್ಕಿ, ಸಂತೋಷ ಕೆ ಜಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ, ಸಂಪತ್ ಅವರುಗಳು ಪಾಲ್ಗೊಂಡಿದ್ದರು. ವಿಶೇಷ ತನಿಖಾ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದ್ದಾರೆ.
0 comments:
Post a Comment